Posted October 16, 2009 by ವೈಶಾಲಿ
Categories: Uncategorized

DSC03748

ಪ್ರಿಯ ಓದುಗ….

ನಿನಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು…..

ಪ್ರೀತಿಯಿಂದ
-ವೈಶಾಲಿ.

ಹುಟ್ಟುತ್ತದೆಲ್ಲಿ ಕವಿತೆ?

Posted October 13, 2009 by ವೈಶಾಲಿ
Categories: Uncategorized

ಹುಟ್ಟುತ್ತದೆಲ್ಲಿ ಕವಿತೆ?
ಹೊರಟಿದ್ದೇನೆ ಹುಡುಕುತ್ತ

ಹಿತ್ತಲ ಬೇಲಿಯಾಚೆಗೆ ದಾಟಿ
ಇಳಿಯುತ್ತಿರುವ ಸೂರ್ಯನ ಸರಿಸಿ
ಎಲೆಗಳ ಮೇಲಿನ ಇಬ್ಬನಿಗಳ ಸವರಿ
ಉಂಹೂ… ಕವಿತೆಯ ಸುಳಿವಿಲ್ಲ.

ಇಲ್ಲೇ ಇದ್ದೀತು ಸುತ್ತಮುತ್ತಲೆಲ್ಲೋ
ಗೆಳೆಯ ಕೊಟ್ಟ ಮೊದಲ ಮುತ್ತಿನಲ್ಲಿ
ಮೈಗಂಟಿ ಕೂತ ದುಪಟ್ಟಾದ ನೆರಿಗೆಗಳಲ್ಲಿ
ಕೂದಲ ಸಿಕ್ಕುಗಳಲ್ಲಿ
ಹೊರಳಾಟದ ರಾತ್ರಿಗಳಲ್ಲಿ
ಇಲ್ಲ….ಸಿಗಲಿಲ್ಲ ಕವಿತೆ

ಇದ್ದಿರಬಹುದೇ ಯುದ್ಧಗಳ ನಾಡಿನಲ್ಲಿ
ಸೋತು ಸುಣ್ಣವಾದವರ ನರನಾಡಿಗಳಲ್ಲಿ
ಅಥವಾ ಗೆದ್ದವರ ಅಟ್ಟಹಾಸದಲ್ಲಿ
ಇರಲಾರದು ಬಿಡಿ ಕವಿತೆ
ಸಮರಭೂಮಿಯಲ್ಲಿ
ಪ್ರೀತಿ ಇಲ್ಲದಲ್ಲಿ ಎಲ್ಲ ಶೂನ್ಯ
ಕವಿತೆಗೇನು ಕೆಲಸ ಅಲ್ಲಿ…

ಇನ್ನೆಲ್ಲಿ ಹುಡುಕಲಿ ನಾನು
ಕನಸು ಕಳೆದುಕೊಂಡವರಲ್ಲಿ
ಬದುಕು ಕಟ್ಟುವವರಲ್ಲಿ
ಕಡಲಂಚಿನ ನಿರಂತರ ಅಲೆಗಳಲ್ಲಿ ಅಥವಾ
ಅಲೆಗಳಿಗೆದುರಾಗಿ ಈಜಿ ಬಸವಳಿಯುತ್ತಿರುವವರಲ್ಲಿ?
ಛೆ!
ಅಷ್ಟು ಸುಲಭಕ್ಕೆ ಸಿಕ್ಕರದು ಕವಿತೆ ಹೇಗಾದೀತು….

ಆದರೆ,
ಚೌಕಟ್ಟುಗಳ ಮುರಿದು ಹೊರಬರುವ ಹೊತ್ತಲ್ಲಿ
ಎಡವಿದ ಘಳಿಗೆಗಳ ಗೆದ್ದು
ಜಗದೆದುರು ನಕ್ಕ ಕ್ಷಣದಲ್ಲಿ…
ನನ್ನೊಳಗ ಮೀರಿ ನಿನ್ನೊಳಗೊಂದಾಗಿ
ಇಟ್ಟ ಹೆಜ್ಜೆಗೆ ಜಗ ಕಂಪಿಸಿದ ದಿನಗಳಂದೂ
ಕೇಳಿದಂತಿತ್ತಲ್ಲ ಕವಿತೆ ಜೀವ ತಾಳಿದ ಸದ್ದು

ಹುಡುಕಬೇಕಿಲ್ಲ ಕವಿತೆಗಳ ಇನ್ನೆಲ್ಲೋ
ಹೊಸ್ತಿಲೀಚೆಗಿನ ಧ್ವನಿಗಳಿಗೆ ಕಿವಿಯಾದರೂ ಸಾಕು
ಕದಡಿದ ಕನಸುಗಳ, ಅದುಮಿಕೊಂಡ ರಾಗಗಳ
ಧ್ವನಿಯಾಗದ ಪಿಸುಮಾತುಗಳ
ಮದ್ಯದಲ್ಲೆಲ್ಲೋ ಸಿಗಬಹುದು ಕವಿತೆ

ತೆರೆಯಬೇಕಷ್ಟೇ ಮನದ ಕಣ್ಣುಗಳ
ಸರಿಸಿಕೊಂಡು ಮನದ ಪರದೆ
ಜೀವದಾಲಾಪಗಳೆಲ್ಲ ತುಂಬಿಕೊಂಡೀತು
ಎದೆಯೊಳಗೆ..

ನನಗೆ ಕವಿತೆ ಸಿಕ್ಕಿದ್ದು ಹಾಗೆಯೇ!

ಮೌನದಲ್ಲನಿಸಿದ್ದು…

Posted October 9, 2009 by ವೈಶಾಲಿ
Categories: Uncategorized

Eyes
ದೀರ್ಘವಾಗುತ್ತವೆ ಹಗಲುಗಳು
ನಿರ್ಜೀವ ಕನಸುಗಳ ಚಪ್ಪರದಡಿ

ತಣ್ಣಗಿನ ಮೌನ, ಬೇಸರದ ಸಂಜೆಗಳು
ಯಾರೆಂದರು ನಿಮಗೆ
ಕೊಲ್ಲಲು ಆಯುಧಗಳೇ ಬೇಕೆಂದು ?

ಇಟ್ಟಲ್ಲಿಯೇ ಇರುವ ಪುಸ್ತಕ
ಮೇಜಿನ ಮೇಲೆ ಎರಡಿಂಚು ಧೂಳು
ಮಸುಕಾದ ಬಿಂಬದ ಬಗೆಗೀಗ
ಕನ್ನಡಿಯೂ ನಿರ್ಲಿಪ್ತ

ಕಿಟಕಿಯಾಚೆಗೆ ಇಣುಕುವ ಮೋಡಕ್ಕೆ
ಗುದ್ದಾಡಿಯಾದರೂ ಸದ್ದು
ಮಾಡುವ ಹಂಬಲ
ಗುಡಿಸುವಾಗ ಕೈಗೆ ಸಿಕ್ಕ ಚೂರು
ಹಗಲುಗನಸಿನದ್ದೆ?

ಮಾತನಾಡ ಬಯಸುತ್ತವೇನೋ
ಸುತ್ತಲಿನ ಗೋಡೆಗಳು
ನನ್ನೆದೆಯ ನಿಟ್ಟುಸಿರ ಸದ್ದು
ಹಳೆಯ ಸಂಗತಿ ಈಗ

ಮಡಚಿ ಎತ್ತಿಟ್ಟ ಪತ್ರದ
ಹಾಳೆಗಳೆಲ್ಲ ಹಳದಿಯಾಗಿವೆ
ಕಾಗದಗಳನ್ನೆಲ್ಲ ದಾಟಿ ಬಂದ ಗೆದ್ದಿಲು
ಹುಡುಕುತ್ತಿರುವುದು ನನ್ನೊಳಗನ್ನಲ್ಲ ತಾನೇ?

ಹೀಗಿಲ್ಲದೆಯೂ ಇರಬಹುದು
ಆಗಾಗ ಸರಿಸುತ್ತಿರಬೇಕು ಮನದ ಪರದೆ
ಬಿರುಬಿಸಿಲಲ್ಲೂ ಒಮ್ಮೊಮ್ಮೆ ಕಣ್ಣು ಕತ್ತಲಾಗುವುದಿದೆ……!

ಮರಳಿ ನೆನಪುಗಳೆಡೆಗೆ….

Posted October 7, 2009 by ವೈಶಾಲಿ
Categories: Uncategorized

IMG_5134

ಕೋಯೀ ಮೌಸಮ್ ಐಸಾ ಆಯೇ
ಉನಕೋ ಅಪನೇ ಸಾಥ್ ಜೋ ಲಾಯೇ…

ಅದೆಷ್ಟೋ ದಿನಗಳೇ ಕಳೆದುಹೊದವಲ್ಲ ನನ್ನ ಬಾಲ್ಕನಿಯಲ್ಲಿ ರಾಗಗಳು ಕೇಳದೇ.. ಒಂದು ಹಿತವಾದ ಮುಸ್ಸಂಜೆ, ಅದಕ್ಕೂ ಚೆನ್ನಾದ ಕೆನೆ ಕಾಫಿ, ತೀರದ ಕನಸುಗಳೊಂದಿಗೆ ಕಳೆದುಹೊಗಲೂ ಮನಸು ಹದಗೊಳ್ಳಬೇಕು. ಏನನ್ನೋ ಓದುತ್ತ ಯಾರ್ಯಾರದೋ ಕನಸುಗಳನ್ನು ,ಯೋಚನೆಗಳನ್ನು ನಮ್ಮ ಕಣ್ಣೊಳಗೆ ತುಂಬಿಕೊಳ್ಳುತ್ತಾ ಮರೆಯಾಗುವುದಕ್ಕಿಂತ ಬಾಲ್ಕನಿಯೊಳಗೆ ನಾನು ನಾನಾಗುವುದೇ ವಾಸಿ ಅಲ್ಲವೇ?

ಉಸ್ ಮೋಡ್ ಸೆ ಶುರೂ ಕರೇ ಫಿರ್ ಯೇ ಜಿಂದಗಿ…..
ಹರ್ ಶೆಜಹಾ ಹಸೀನ್ ಥೀ ಹಮ್ ತುಮ್ ಥೇ ಅಜನಬೀ…

ಹೀಗೆಲ್ಲ ಯೋಚಿಸುವುದು ತಪ್ಪಾದೀತು. ಕಳೆದು ಹೋದ ಕಾಲಕ್ಕೆ ತಿರುಗಿ ಹೋಗಿಬಿಟ್ಟರೆ ನನ್ನ ನನಸಾದ ಕನಸುಗಳ ಕಥೆ ಏನಾಗಬೇಡ? ದಿನಗಳಿದ್ದವು……. ಜಡಿಮಳೆಗೆ ಕೈಯೊಡ್ಡಿ ಕನಸು ಕಾಣುತ್ತ ಅಲ್ಲೇ ನಿಂತು ಬಿಡುವ ಕ್ಷಣಗಳು. ಓದುತ್ತ ಓದುತ್ತ ಇತಿಹಾಸ, ಗಣಿತ..ವಿಜ್ನಾನಗಳೆಲ್ಲ ಕಲಸು ಮೇಲೋಗರವಾಗಿ ಕುಳಿತಲ್ಲೇ ನಿದ್ದೆ ಹೋಗುವ.. ನಡೆದಷ್ಟೂ ದೂರವಾಗುವ ರಸ್ತೆಯಲ್ಲಿ ಅಪರೂಪಕ್ಕೆ ಇಷ್ಟವಾಗುವ ಏಕಾಂಗಿತನದ… ಕಾಣದ ಗೆಳೆಯನ ಕಲ್ಪನೆಯ ಸುಖದ ಅದೆಷ್ಟೋ ಘಳಿಗೆಗಳು..

ಬೀತೇ ಲಮ್ಹೆ ಕುಚ್ ಐಸೆ ಹೈ
ಖುಷ್ಬೂ ಜೈಸೆ ಹಾತ್ ನ ಆಯೇ….
ಹಾಲ್ ಜೋ ದಿಲ್ ಕಾ ಜುಗನೂ ಜೈಸಾ
ಜಲತಾ ಜಾಯೆ.. ಭುಜತಾ ಜಾಯೆ….

ನೆನಪುಗಳ ಜೋಳಿಗೆಗೆ ಕೈ ಹಾಕಿದರೆ ಲೆಕ್ಕವಿಲ್ಲದಷ್ಟು ಬಿಂಬಗಳು. ನೋಡ ನೋಡುತ್ತಲೇ ಬಾಲ್ಕನಿಯಲ್ಲಿ ಕತ್ತಲಾವರಿಸುತ್ತದೆ. ಎಳನೀರು ಗಾಡಿಯವನು ಸವೆದು ಬಣ್ಣ ಕಳೆದುಕೊಂಡ ನಸುನೀಲಿ ತಾಡಪಾಲು ಗಾಡಿಗೆ ಮುಚ್ಚಿ ಮನೆಗೆ ಹೊರಡಲು ರೆಡಿಯಾಗುತ್ತಾನೆ.. ಪುಟ್ಟ ಪಾಪುವಿಗೆ ಅಮ್ಮ ಉಣಿಸುವ ಹಾಲು ಅನ್ನ ಬೇಸರವಾಗಿದೆ. ಆಗಸದ ಚಂದ್ರನೂ ಹಳತಾಗಿದ್ದಾನೆ. ಮೀನು ಮಾರುವವವನ ಅಂಗಡಿಯೆದುರು ಇಳಿಸಿಹೋದ ದೊಡ್ಡ ದೊಡ್ಡ ಮಂಜುಗಡ್ಡೆಗಳು ಕರಗಲು ಶುರುವಾಗಿವೆ… ಕತ್ತಲೆಂದರೆ ಯಾರಿಗೋ ಮುಗಿದ ದಿನ. ಮತ್ತಾರದೋ ಕನಸು ಕಾಣುವ ಕಣ್ಣುಗಳಿಗೆ ಮುಗಿಯದ ಇರುಳು….

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ…. ನೀನಿಲ್ಲದೆ……

ಗಝಲ್ ಗಳೂ ಬೇಸರವಾದಾಗ ಸೋನು ನಿಗಮ್ ಮನ ತುಂಬುತ್ತಾನೆ… ಅದು ಯಾವತ್ತಿಗೂ ಬೇಸರವಾಗದ ಭಾವ! :)
ಬೇಸರಕ್ಕೂ ಸೈ.. ಕನವರಿಕೆಗಳಿಗೂ ಸರಿ , ಪ್ರೀತಿಗೂ ಸರಿ.. ಕಡಲ ತೀರದ ಅಲೆಗಳಿಗೆ ಕಾಲು ಚಾಚಿ ಕುಳಿತ ಹೊತ್ತಿನಿಂದ ಹಿಡಿದು ಬೇಸರದ ಸಂಜೆಗಳಲ್ಲಿ ಮೌನಕ್ಕೆ ಶರಣಾದ ಕ್ಷಣಗಳವರೆಗೆ…

ಧುನಿಯಾ ಕಿ ರಸ್ಮೋ ಕೋ ಚಾಹತ್ ಮೇ ಶಾಮಿಲ್ ನ ಕರನಾ..
ಮಂಜಿಲ್ ಹಮ್ ಅಪನೀ ಪಾ ಕೆ ರಹೇಂಗೇ ನಾ ತುಮ್ ಕಿಸೀಸೇ ನ ಢರನಾ

ಪಾಗಲ್ ರಸ್ಮೆ ಪಾಗಲ್ ಧುನಿಯಾ
ಔರ ಥೋಡೇ ಹಮ್ ತುಮ್ ಪಾಗಲ್ ….

ನಾನು, ನನ್ನ ಬಾಲ್ಕನಿ ಇಬ್ಬರು ಮತ್ತೆ ನೆನಪುಗಳಿಗೆ ಮರಳುತ್ತಿದ್ದೇವೆ… ಹೊಸ ಹೊಸ ಕನಸುಗಳೊಂದಿಗೆ…..

ಕತ್ತಲಾಗುವ ಹೊತ್ತು….

Posted September 16, 2009 by ವೈಶಾಲಿ
Categories: Uncategorized

ಕತ್ತಲಾಗುವ ಹೊತ್ತು
ನೆರಳುಗಳಿಗೆಲ್ಲ ಅಸ್ತಿತ್ವ ಕಳೆದುಕೊಳ್ಳುವ ಭಯ

ಬೆಳಗಿಡೀ ಸುರಿದ ಮಳೆಯ ಕಟ್ಟಕಡೆಯ ಹನಿ
ಒಳಮನೆಯಲ್ಲಿ ಉಕ್ಕುತ್ತಿರುವ ಹಾಲು
ಬಂಧಿಯಾಗಿದ್ದ ಪೆನ್ನು ಪುಸ್ತಕಗಳಿಗೆಲ್ಲ
ಪಾಟೀಚೀಲದಿಂದ ಮುಕ್ತಿ

ಅಂಗಿಯ ಮೇಲೆಲ್ಲಾ ಶಾಯಿಯ ಗುರುತು
ಅಳಿಸಿದಷ್ಟೂ ಉಳಿಯುವ ಕಲೆ
ಮಡಚಿ ಒಳಗಿಟ್ಟ ಕೊಡೆಯಲ್ಲಿ
ಒದ್ದೆ ಒದ್ದೆ ನೆನಪುಗಳು….

ಹೊಸ್ತಿಲಾಚೆಗಿಂದ ಕೇಳುವ ಬಿಕ್ಕು
ದೇವರ ನಾಮದಲ್ಲೀಗ ಭಕ್ತಿ ಲಯ
ಮಾಡಿಗಂಟಿ ಕುಳಿತ ಗುಬ್ಬಚ್ಚಿಯದು
ಕಾತರದ ನೋಟ

ಕತ್ತಲಾಗುವ ಹೊತ್ತು
ದಾರಿಗಳದ್ದೇನೋ ಗೊಣಗಾಟ
ಚೆಲ್ಲಿದ ಮೈ ತಂಪಾಗಿ ಅನಾಥಭಾವ ..
ಕಡುಗತ್ತಲಾದ ಮೇಲೆ ಜಗವೆಲ್ಲ ಹಳದಿ

ದಾರಿ ಕೂಡುವಲ್ಲಿ..

Posted September 10, 2009 by ವೈಶಾಲಿ
Categories: Uncategorized

ಇದು ನನ್ನದಲ್ಲದ ಕವಿತೆ. ಬಾಲ್ಕನಿ ಗೆ ಬಂದು ಕುಳಿತಿತ್ತು. ನಂಗೆ ಖುಷಿಯಾಗಿದ್ದರಿಂದ ನಿಮ್ಮೊಂದಿಗೂ ಹಂಚಿಕೊಳ್ಳೋಣ ಅಂತ. ಯಾರದ್ದು ಅಂತ ಕೇಳಬೇಡಿ. ನಿಮಗೆ ಗೊತ್ತಿದ್ದಷ್ಟೇ ನನಗೂ.
….. just enjoy!

ದಾರಿ ಕೂಡುವಲ್ಲಿ..

ಬೆಳಕು ಮೂಡುವ ಘಳಿಗೆ
ಕಣ್ಣ ಬಿಚ್ಚಿದರೆ
ರೆಪ್ಪೆಗಳಗಿಂದ ಹಾರಿದ ಕನಸು
ಬೆಳಕಿನ ಬಣ್ಣಗಳಲ್ಲಿ ಲೀನ

ಇಲ್ಲ, ಬೆಳಗಿಗೆ ಬಣ್ಣ ತುಂಬಿ
ಬಿಸಿಲ ತೋರಿದ್ದೂ ಅದೇ ಇರಬಹುದು

ದಿನದುದ್ದಕೂ ಕನಸ ಹುಡುಕುತ್ತ
ಹೊರಟ ಹಾದಿಯಲ್ಲಿ
ಸಿಕ್ಕ ವಾಸ್ತವವನ್ನೆಲ್ಲ ಹೆಕ್ಕುತ್ತ
ದೂರ ನೋಡಿದರೆ
ಬಿಸಿಲಿಗಾಗಲೇ ಸುಸ್ತು ಹೊಡೆದು
ಮತ್ತದೇ ಬಣ್ಣಗಳ ಆಟ

ಸೂರ್ಯ ಮುಳುಗುವ ಹೊತ್ತು
ತಂಪಾಗಿ ನಡೆದುಬಿಡುತ್ತೇನೆ
ಹೆಜ್ಜೆಗಳ ಬಿರುಸೆಲ್ಲ ನಿಧಾನ
ನಿಧಾನವಾಗಿ ಇಳಿವಲ್ಲಿ
ಕುಳಿತು ಸಾಯಂಕಾಲ ಸವಿಯುತ್ತೇನೆ

ಗಾಳಿ ತನ್ನಿರುವ ಸ್ಪಷ್ಟಪಡಿಸುವಾಗ
ಕುಳಿತಲ್ಲೆ ಕದಲಿ ಖುಷಿಯಾಗಿ
ಸುಳಿಯಾಗುವ ಮುಂಗುರುಳ ತೀಡಿ
ಹಗುರಾಗಿ ಹೊರಡುತ್ತೇನೆ
ಬೆಳಕು ದಾರಿ ಕೂಡುವಲ್ಲಿ

ನಾನವಳಲ್ಲ….

Posted September 9, 2009 by ವೈಶಾಲಿ
Categories: Uncategorized

ಒಂದು ಕಡೆ ಬ್ಲಾಗಿನ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಇನ್ನೆಲ್ಲೋ ಕೆಸರೆರೆಚಾಟ ಮುಂದುವರೆದೇ ಇದೆ. ಮತ್ತೆಲ್ಲೋ ಬ್ಲಾಗಿಗರು ಬಾಗಿಲು ಮುಚ್ಚುತ್ತಿದ್ದಾರೆ. ನಾನು ನನ್ನ ಪಾಡಿಗೆ ಬಾಲ್ಕನಿಯಲ್ಲಿ ಕುಳಿತು ಕೆನೆ ಕಾಫಿ ಹೀರೋಣ ಅಂದ್ರೆ ನೀನ್ಯಾಕೆ ದೂರ ಅಂತ ನಂಗೂ ಒಂದು ತಲೆಬಿಸಿ ಸುತ್ತಿಕೊಂಡಿದೆ. ನಾನು ನಾನೇನಾ? ಅಥವಾ ನಾನು ಅವಳಾ? ಇಲ್ಲಾ, ಅವಳೇ ನಾನಾ? ಫುಲ್ ತಲೆಬಿಸಿ. ನಂಗೂ ಹೇಳಿ ಹೇಳಿ ಸಾಕಾಯ್ತು.

ಈಗ ವಿಷ್ಯ ಏನಪ್ಪಾ ಅಂದ್ರೆ, ಕೆಂಡಸಂಪಿಗೆ ವೆಬ್ ಸೈಟ್ ಗೆ ಹೋದರೆ ನಿಮಗೆ ವೈಶಾಲಿ ಹೆಗಡೆ ಅನ್ನುವವರ ಬರಹಗಳು ಸಿಗುತ್ತೆ. ಕೆಂಡಸಂಪಿಗೆಯ ಬರಹಗಾರರ ಬಳಗದಲ್ಲಿ ಅವರೂ ಒಬ್ಬರು. ಚಂದದ ಕವಿತೆಗಳನ್ನೂ ಬರೀತಾರೆ.

ಈಗ ಕನ್ಫ್ಯೂಷನ್ನು ಏನಂದ್ರೆ ನಾನವಳಲ್ಲ! ತುಂಬಾ ಜನ ನಂಗೆ ಕೇಳಿದ್ರು. ಕೆಂಡಸಂಪಿಗೆಗೆ ಬರೆಯೋ ವೈಶಾಲಿ ಹೆಗಡೆ ನೀವೇನಾ ಅಂತ. ನಮ್ಮಿಬ್ಬರ ಹೆಸರು, ನಾವಿಬ್ಬರೂ ಹೊರದೇಶದಲ್ಲಿರುವವರೂ ಆಗಿದ್ದರಿಂದ ಈ ಗೊಂದಲ ಆಗಿರಬಹುದು. ಬಹುಶಃ ನನ್ನ ಈ ಅನುಭವ ಅವರಿಗೂ ಆಗಿರಲಿಕ್ಕೆ ಸಾಕು. ಹಾಗಾಗಿ ದಯವಿಟ್ಟು ಕನ್ಫ್ಯೂಸು ಆಗ್ಬೇಡಿ :) ನಾನವಳಲ್ಲ…. ಏನೋ..ಚಿಕ್ಕದೊಂದು ಬ್ಲಾಗು ಅಂತ ಮಾಡ್ಕೊಂಡು ಬಾಲ್ಕನಿಲಿ ಕಾಫಿ ಕುಡ್ಕೊಂಡು, ಹಾಡು ಕೇಳ್ಕೊಂಡು ಹಾಯಾಗಿದ್ದೆ. ಇದೇನೋ ಹೊಸ ಗೊಂದಲ ಮೈಮೇಲೆ ಬಿತ್ತು. ಈಗ ಸ್ವಲ್ಪ ಓಕೆ… ಇದನ್ನ ಹೇಳಿದ್ಮೇಲೆ ತಲೆಬಿಸಿ ಕಡಿಮೆಯಾಗುತ್ತೆ ಅಂದ್ಕೊಂಡಿದೀನಿ.

ಕಾಫಿ ಆರೋಯ್ತು  :(  :(

- ವೈಶಾಲಿ

ಕಾಯುವುದೆಂದರೆ…..

Posted September 4, 2009 by ವೈಶಾಲಿ
Categories: Uncategorized

ಕಾಯುವುದೆಂದರೆ ಕರಗುತ್ತಿರುವಂತೆ
ನನಗನ್ನಿಸಲಿಲ್ಲ ಹಾಗೆ

ಕರಗುವುದಾದರೆ ಮೊದಲು ಮೆದುವಾಗಬೇಕು
ನಂತರ ಹನಿ
ಹನಿಯಾಗಿ ಕೆಳಗಿಳಿಯಬೇಕು
ಮೆಲ್ಲನೆ ಹರಿದು ಹಗುರಾಗಬೇಕು
ಅದೆಲ್ಲ ಆಗು ಹೋಗುವ ಮಾತೆ?

ಕಾಯುವಾಗೆಲ್ಲ ಕಿಡಿಯಾಗುತ್ತೇನೆ ನಾನು
ಅದು ಜಡ್ಡುಗಟ್ಟುವ ಕ್ರಿಯೆ
ಕುಳಿತಲ್ಲೇ ನಿದ್ದೆ ಹೋಗಿದ್ದೇನೆ ಕೂಡ

ಕಾದಂತೆಲ್ಲ ಕಳಿಯುತ್ತದೆ ಮನ
ನನಗನ್ನಿಸಲಿಲ್ಲ ಹಾಗೆ
ಮನದೊಂದಿಗೆ ತಲೆಯನ್ನೂ ಕಾಯಿಸಿಕೊಂಡಿದ್ದಿದೆ
ಕಣ್ಣ ರೆಪ್ಪೆಗಳಿಗೀಗ ಭಾರಕ್ಕೆ ಶಕ್ತವಲ್ಲ

ಕಾಯುವಿಕೆಯೆಂದರೆ ಕಡಲಾಗುವಿಕೆ
ಎಷ್ಟು ಈಜಿದರೂ ಬಾರದ ತೀರ
ಬಗೆಹರಿಯದ ನೀರವತೆ
ಒಳಹೊರಗೆಲ್ಲ ಮೌನ,
ಮಾತು ಕೊಂದ ನಂತರದ ಖುಷಿ

ಕಾಯುವುದೆಂದರೆ ಕೆನೆಗಟ್ಟಿದಂತೆ
ಪದರು ಪದರಾದ ಸಿಟ್ಟು ಅಸಹನೆ
ಕೈ ತಪ್ಪಿದ ತಾಳ್ಮೆ
ಕಾಯುವುದೆಂದರೆ ಕೆಟ್ಟು ಹೋದ ಗಡಿಯಾರ…..

Cheers!

Posted September 2, 2009 by ವೈಶಾಲಿ
Categories: Uncategorized

 

cheers!2

 

ಕೆನೆ ಕಾಫಿ ಹದಗೊಂಡಿದೆ!

ಪುಟ್ಟದೊಂದು ಬಾಲ್ಕನಿ, ಮುಳುಗುತ್ತಿರುವ ಸೂರ್ಯ, ಬೊಗಸೆಯಲ್ಲಷ್ಟು ಕನಸುಗಳು, ಮುಗಿಯದ ನೆನಪುಗಳು.. ಹಿನ್ನೆಲೆಯಲ್ಲಿ ಗಜಜಿತ್ ರ ಸುಂದರ ಗಜ್ಹಲ್, ಮತ್ತು ಒಂದು ಕಪ್ ಕೆನೆ ಕಾಫಿ….
ಜೊತೆಯಲ್ಲಿ ನಾನು ನೀವು ಮತ್ತು ಅಕ್ಷರಗಳು..

ವರುಷ ಕಳೆದು ಹೋಯಿತು..
ಬ್ಲಾಗಿನ ಬಾಗಿಲು ತೆರೆದು.. ಅಕ್ಷರಗಳ ಸಲುಗೆ ಪಡೆದು.. ಓದುಗರ ಮನಸ್ಸಿಗಿಳಿದು..

ಹಾಲು ಬಿಸಿ ಮಾಡಿ, ಎರಡೇ ಎರಡು ಸ್ಪೂನ್ ಸಕ್ಕರೆ ಹಾಕಿ, ಸ್ವಲ್ಪ ಕಾಫಿ ಪುಡಿ, ಸಾಕಷ್ಟು ಕೆನೆ ಬೆರೆಸಿ ಹೆದರುತ್ತಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ನಾನಂದುಕೊಂಡಷ್ಟು ಸೂಪರ್ ಆಗಿರಲಿಲ್ಲವಾದರೂ ಅಷ್ಟೇನೂ ಕೆಟ್ಟ ಕಾಫಿ ಕೂಡ ಆಗಿರಲಿಲ್ಲ ಅಂದುಕೊಳ್ತೀನಿ. ಕಾಫಿಯ ಪರಿಮಳ ಮಾತ್ರ ಜೋರಾಗಿಯೇ ಇತ್ತು ಅನ್ನೋದು ನೀವು ಮತ್ತೆ ಮತ್ತೆ ಬಾಲ್ಕನಿಯಲ್ಲಿ ಇಣುಕಿದ್ದು ನೋಡಿ ಖಾತ್ರಿಯಾಗಿದೆ!

ಇಷ್ಟೆಲ್ಲಾ ಆಗುವ ಮುನ್ನದ ಒಂದಷ್ಟು ‘ಸೀನ್’ ಗಳನ್ನೂ ಹೇಳಿಯೇಬಿಡ್ತೇನೆ. ಚಿಕ್ಕವಳಿದ್ದಾಗಿನಿಂದಲೂ ನಂಗೆ ಅನಿಸಿದ್ದನ್ನೆಲ್ಲ ಗೀಚುವ, ಕವಿತೆಯಂತಹ ಸಾಲುಗಳನ್ನೆಲ್ಲ ಬರೆದು ಬರೆದು ಬಿಸಾಕುವ ಚಟವಿತ್ತು. ಹಾಗೂ ಅದು ನಂಗೆ ಮಾತ್ರ ಗೊತ್ತಿತ್ತು! ಯಾವತ್ತೋ ಒಂದಿನ ಒಲೆಗೆ ಹೋಗುವ ದಾರಿಯಲ್ಲಿದ್ದ ಅಂತಹ ಕವಿತೆಯೊಂದು ಅಕಸ್ಮಾತಾಗಿ ನಮ್ಮಮ್ಮನ ಕೈಗೆ ಸಿಕ್ಕು, ಅದು ನಮ್ಮನೆಯಲ್ಲೇ ಜಗಜ್ಜಾಹೀರಾಗಿ.. ನಾನು ವಿಶೇಷ ಗೌರವವೊಂದು ಸಿಕ್ಕ ಫೋಸು ಕೊಟ್ಟು ಓಡಾಡಿದ್ದು ಹಳೇ ಕಥೆ. …

ಇಷ್ಟೆಲ್ಲಾ ಆದ ಮೇಲೂ ಕವಿತೆಗಳೆಲ್ಲ ಅಡಗಿಯೇ ಕುಳಿತಿದ್ದವು. .. ನನ್ನ ಹುಡುಗ ಮನಸ್ಸಿನೊಳಗೆ ಎಂಟ್ರಿ ಕೊಡುವ ತನಕ!
ನಂತರ ಕವಿತೆಗಳೆಲ್ಲ ಹನಿಗಳಾಗಿ ಆ ಹನಿಗಳೆಲ್ಲ sms ಗಳಾಗಿ…. ಈಗದು ಫ್ಲಾಶ್ ಬ್ಯಾಕ್! :)

ಇಷ್ಟೆಲ್ಲಾ ಕಂತೆ ಪುರಾಣದ ನಂತರ ಮದುವೆಯೂ ಆಯ್ತು. ಇನಿಯ ‘ಪತಿ’ಯಾದ. ಪಟ ಪಟ ಮಾತಾಡಿಕೊಂಡಿದ್ದ ನಾನು ಮನೆಯಲ್ಲಿ ಒಬ್ಬಳೇ ‘ಬೋಲ್ತಿ ಬಂದ್’ ಸ್ಥಿತಿಯಲ್ಲಿ ಕುಳಿತುಬಿಟ್ಟೆ. ಮಾತೆಲ್ಲ ಕರಗಿ ಮೌನ ಮೊದಲಾಯ್ತು. ನನ್ನ ಮನದ ಬಾಗಿಲಿಗೆ ಇಣುಕಿ ಬೋರಾಗಬೇಡ ಪ್ರಿಯೆ ಅಂದ ನನ್ನವ ಬ್ಲಾಗಿನ ಬಾಗಿಲು ತೆರೆಸಿ ಮತ್ತಷ್ಟು ಮೌನವಾದ. ನಂತರದಲ್ಲಿ ಮಾತಾಡಿದ್ದೆಲ್ಲ ನಾನು ನೀವು ಮತ್ತು ನನ್ನ ಬಾಲ್ಕನಿ!

ಹಾಗಾಗಿ ಮೊದಲ thanx ನನ್ನವನಿಗೆ, ಜೊತೆಗೆ, ಮಾಡಿಟ್ಟ ಕಾಫಿ ಕೊಡಲು ಹಿಂಜರೀತಾ ಕೂತಿದ್ದ ನನ್ನ ಏಳಿಸಿ ಬಾಲ್ಕನಿಗೆ ಕಳಿಸಿದ ಗೆಳತಿ ಸೌಪರ್ಣಿಕ ,ಗೆಳೆಯ ಸೀತಾಳಭಾವಿಗೆ ಹಾಗೂ ಎಷ್ಟೇ ಕೆಟ್ಟ ಕಾಫಿ ಕೊಟ್ಟರೂ ಬೇಸರಿಸದೆ ಕುಡಿದ ನಿಮಗೆ ತುಂಬಾ ತುಂಬಾ ಪ್ರೀತಿಯ ಥ್ಯಾಂಕ್ಸು !

ಇವೆಲ್ಲದರ ಮಧ್ಯೆ ಮತ್ತೆ ನನ್ನ ಬಾಲ್ಕನಿ ಬದಲಾಗಿದೆ.

ಪುಟ್ಟದೊಂದು ಕಪ್ ಕೆನೆ coffee ಮಾಡಿಕೊಂಡು ಸವಿಯುತ್ತ ಕೂರೋಣ ಅಂದುಕೊಳ್ಳುತ್ತಿರುವಾಗಲೇ ಬಾಲ್ಕನಿಯ ಬಾಗಿಲು ತೆರೆಯಲೂ ಪುರುಸೊತ್ತಿಲ್ಲದಂತೆ ಮತ್ತೆ ದೇಶ ಬಿಟ್ಟು ಹಾರಿ ಬಂದಿದ್ದೇನೆ :(

ಯುರೋಪಿನ ಚಳಿಯಲ್ಲಿ ಗಡಗಡ ನಡುಗುತ್ತ ಬ್ಲಾಗಿನ ಬಾಗಿಲು ತೆರೆದ ನಾನು ಮರಳಿ ನನ್ನೂರಿಗೆ ಬಂದ ಖುಷಿಯಲ್ಲಿ ಇರುವಾಗಲೇ ಮತ್ತೆ ಸಮುದ್ರ ದಂಡೆಯ ದೇಶಕ್ಕೆ ಬಂದು ಕುಳಿತಾಗಿದೆ. ಸಮುದ್ರ ನನ್ನ ಪ್ರೀತಿಯ ಸಂಗತಿ ಕೂಡ . ಖುಷಿಯೇನಂದರೆ ನನ್ನೂರಲಿ ಮುಚ್ಚಿದ್ದ ಬ್ಲಾಗಿನ ಬಾಗಿಲು ಮತ್ತೆ ಇಲ್ಲಿ ತೆರೆದುಕೊಳ್ಳುತ್ತದೆಂಬುದು. ಮೌನದಲ್ಲಿ ಅಕ್ಷರಗಳು ಜೊತೆಯಾದಷ್ಟು ಇನ್ನಾರೂ ಜೊತೆಯಾಗಲಿಕ್ಕಿಲ್ಲ ಅಲ್ಲವೇ?

ನಿಜ ಹೇಳಬೇಕೆಂದರೆ ಬ್ಲಾಗಿಗೆ ವರುಷ ತುಂಬಿ ವಾರ ಕಳೆದುಹೋಯಿತು. ಹಾಗೂ ನಾನಿದನ್ನ ಮರೆತಿದ್ದೆ. ವರ್ಷ ಪೂರೈಸಿದ್ದು ಸಾಧನೆಯೇನು ಅಲ್ಲವಾದರೂ ಎಲ್ಲೋ ಕುಳಿತಿದ್ದ ನನಗೆ ಬರಹಗಳು ಜೊತೆಯಾಗಿದ್ದು, ಮನಸಿನ ಮೂಲೆಯಲ್ಲಿ ಅಡಗಿದ್ದ ಭಾವಗಳನ್ನೆಲ್ಲ ಅಕ್ಷರಕ್ಕಿಳಿಸಿದ್ದು, ನಿಮ್ಮೊಡನೆ ಹಂಚಿಕೊಂಡಿದ್ದು, ಎಲ್ಲಕ್ಕೂ ಹೆಚ್ಚಾಗಿ ನೀವದನ್ನು ತುಂಬು ಪ್ರೀತಿಯಿಂದ ಮನದಾಳಕ್ಕಿಳಿಸಿಕೊಂಡಿದ್ದು ನನಗೆ ತುಂಬಾ ಖುಷಿಕೊಟ್ಟ ಸಂಗತಿ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳೋದು ಕರ್ತವ್ಯ ಕೂಡ. ಅಲ್ವೇ? ಥ್ಯಾಂಕ್ಸ್ ಮತ್ತೊಮ್ಮೆ.

ಈ ಪ್ರೀತಿ ನಮ್ಮೊಡನೆ ಸದಾ ಇರಲಿ. ಮಳೆಯ ನಂತರದ ತಂಪಿನಂತೆ.. ರಾತ್ರಿಯ ಸುಂದರ ಕನಸುಗಳಂತೆ…ಕಾಫಿಯ ಘಮದಂತೆ….

-ವೈಶಾಲಿ.

ಕಳೆದ ರಾತ್ರಿಯ ಕನವರಿಕೆಗಳು!

Posted May 14, 2009 by ವೈಶಾಲಿ
Categories: Uncategorized

ಮುಸ್ಸಂಜೆಯ ಹೆಬ್ಬಾಗಿಲಲ್ಲಿ
ಕತ್ತಲ ಚೀಲವೊಂದನ್ನಿಟ್ಟು ನಡೆದ ಸೂರ್ಯ
ತೆರೆದು ನೋಡಿದರೆ ಎಣಿಸಲಾರದಷ್ಟು ಕನಸುಗಳಿದ್ದವು
ಜೊತೆ ನಿನ್ನ ನೆನಪ ಸೇರಿಸಿ ಪೋಣಿಸಿದೆ
ಕೊರಳಲ್ಲೀಗ ನಗುವ ಹಾರವಿದೆ!

++++++++++++++++++++++++++++

ಮುಂಜಾವಿನ ಬೆಳಕ ಪರದೆಯ ಹಿಂದೆ
ಕನಸುಗಳ ಮೆರವಣಿಗೆ
ರಾತ್ರಿಯರಮನೆಯ ಹೆಬ್ಬಾಗಿಲಲ್ಲಿ ನಿಂತ ಸೂರ್ಯ
ಮೆಲ್ಲಗೆ ಕನಸು ಕದಿಯುತ್ತಾನೆ!

+++++++++++++++++++++++++++

ಮುಗಿಯದ ದಾರಿ, ತಿರುವಲ್ಲಿ ಕತ್ತಲು
ದಿಕ್ಕಿಲ್ಲ ದೆಸೆಯಿಲ್ಲ
ದೂರದಲ್ಲೊಂದು ಬೆಳಕು, ಜೊತೆಗಷ್ಟು ಕನಸು
ಸುಮ್ಮನೆ ಬಳಿ ಬಂದು ದಿಟ್ಟಿಸಿದೆ
ಅದು ನೀನು!

+++++++++++++++++++++++++

ಅವನು ಮೋಡವಾದ
ನಾನು ಮಿಂಚಾದೆ
ಎದುರು ಬದರಾಗಿದ್ದು ಒಂದೇ ಕ್ಷಣ
ಆತ ಹನಿ ಸುರಿಸಿ ಕರಗಿ ಹೋದ
ನಾನು ಬೆಳಕು ನೀಡಿ ಒಂಟಿಯಾದೆ…..

++++++++++++++++++++++++

 ನನ್ನ ಕನಸುಗಳ ಹಾದಿಗೆ ಕಾಲಿಡುವ
ಮುನ್ನ ನಕ್ಕುಬಿಟ್ಟೆಯೇಕೆ?
ಬೆಳದಿಂಗಳಿಗೆ ಜಾಗವಿಲ್ಲವೆಂದು
ಚಂದ್ರ ಮುನಿದಿದ್ದಾನೆ!

++++++++++++++++++++++++

ನನಗಿನ್ನು ಕನಸುಗಳು ಕಾಡುವುದಿಲ್ಲ
ಅವುಗಳಿಗೆ ನಿನ್ನ ರಾತ್ರಿಗಳ
ವಿಳಾಸ ನೀಡಿದ್ದೇನೆ!