ಮೌನದಲ್ಲಷ್ಟು ಮಾತು….

ಇವತ್ತು ಬಾಲ್ಕನಿ ತಣ್ಣಗಿದೆ…
ಹೋಗಿ ಒಂದಷ್ಟು ಕನಸು ಹೆಕ್ಕಿಕೊಂಡು ಬರೋಣ ಎಂದರೆ ಮೈ ಕೊರೆವ ಚಳಿ, ಆಗಾಗ ಮಳೆಹನಿ.
ಜೊತೆಗೊಂದಷ್ಟು ಮೌನ. ..

ಮೊದಲೆಲ್ಲ ಕಂಡರಾಗದು ಎಂಬಂತಿದ್ದ, ಹತ್ತಿರ ಬಂದರೆ ಮಾರುದೂರ ಓಡಿಸುತ್ತಿದ್ದ ಮೌನ ಈಗೀಗ ಇಷ್ಟವಾಗತೊಡಗಿದೆ. ಹಗಲುಗನಸಿನ ಕ್ಷಣಗಳಲ್ಲಷ್ಟೇ ಜೊತೆಯಾಗುತ್ತಿದ್ದುದು ಈಗ ಅನಿವಾರ್ಯವೆಂಬಂತೆ ಆವರಿಸಿಕೊಳ್ಳುತ್ತಿದೆ. ಕರೆದಾಗಲೆಲ್ಲ ಜೀ ಹಜೂರ್ ಎಂದು ಓಡಿ ಬರುತ್ತಿದ್ದ ಮಾತಿಗೆ ಈ ಒಡತಿ ಬೇಸರವಾಗಿರಬೇಕು!

ಮೌನವನ್ನು ವಿಪರೀತ ಇಷ್ಟಪಡುವ ಗೆಳೆಯನೊಬ್ಬನಿದ್ದ. ಮಾತು ಹಿಂಸೆ ಕಣೆ ಎಂದು ಆತ ಅನ್ನುತ್ತಿದ್ದರೆ ಮೌನ ಅದಕ್ಕಿಂತ ಹಿಂಸೆ ಕಣೋ ಅಂತ ನಾನು ವಾದಿಸುತ್ತಿದ್ದೆ. ಕೊನೆಯಲ್ಲಿ ನನ್ನ ಮಾತೇ ಗೆದ್ದರೂ ನಂತರ ನನಗೆ ಜೊತೆಯಾಗುತ್ತಿದ್ದುದು ಮತ್ತದೇ ಮೌನ ಮತ್ತು ಏಕಾಂತ. ಅವನ ಮೌನ ಇಂದಿಗೂ ಸೋತಿಲ್ಲ. ಬದಲಾಗಿ ನಾನೇ ಅವನ ದಾರಿ ಹಿಡಿದಿದ್ದೇನೆ! ಇದು ಆತನಿಗೆ ತಿಳಿದರೆ ಕೊನೆಗೂ ಬುದ್ದಿ ಬಂತಲ್ಲ ಅಂತ ಖುಷಿಪಟ್ಟಾನು !

ಮೌನವಾಗುವುದೂ ಕೂಡ ಅದೆಷ್ಟು ಕಷ್ಟದ ಕೆಲಸ ಅನ್ನಿಸುತ್ತದೆ ಒಮ್ಮೊಮ್ಮೆ. ಮನದ ಮಾತುಗಳನ್ನೆಲ್ಲ ಕೂಡಿಟ್ಟು, ಕಟ್ಟಿಹಾಕಿ ಮೌನದ ಪರದೆ ಹಾಕಿಬಿಡುವುದು.. ರೆಕ್ಕೆ ಬೀಸಿ ಹಾರಾಡುವ ಪುಟ್ಟ ಹಕ್ಕಿಯೊಂದನ್ನು ತಂದು ಗೂಡೊಳಗೆ ಹಾಕಿ ಸಂತಸಪಡುವಂತೆ. ಇಲ್ಲಿಯೇ ಓಡಾಡಿಕೊಂಡಿರಿ ಮಾತುಗಳೇ, ಹೊರಗೆ ಹಾರಾಡಿದರೆ ರೆಕ್ಕೆ ಕಳಚಿಬಿದ್ದೀತು ಎಂಬಂತೆ….

ಮೊದಲೇ ಮಳೆಯ ಊರು. ಕರೆಂಟಿಲ್ಲದ ರಾತ್ರಿಗಳು. ಜಡಿಮಳೆ. ಇವೆಲ್ಲವನ್ನೂ ಮೀರಿದ ಮನದೊಳಗಿನ ಮೌನ. ನನ್ನ ಅದೆಷ್ಟು ರಾತ್ರಿಗಳ ನಿದ್ದೆ ಮಳೆಯೊಳಗೆ ಕರಗಿ ಹೋಗಿದ್ದಿದೆ.
ಶಾಲೆ ತಪ್ಪಿಸಿದ್ದಕ್ಕೆ ಅಪ್ಪ ಬೈದ ಎಂದು ಮಾತು ಬಿಟ್ಟು ಕುಳಿತು ನಂತರ ಎರಡು ದಿನ ಮಾತನಾಡಲೂ ಆಗದೆ, ಸುಮ್ಮನಿರಲೂ ಆಗದೆ ಚಡಪಡಿಸಿದ್ದಿದೆ.. …
ಯಾವಾಗಲೂ ನಾನೇ ಮಾತಾಡಬೇಕು, ನೀ ಮಾತೇ ಆಡುವುದಿಲ್ಲ ಅಂತ ನನ್ನ ಹುಡುಗನೊಂದಿಗಿನ ತಕರಾರು ಮುಗಿಯದ ಕಥೆ….

ಇಷ್ಟೆಲ್ಲಾ ಆದರೂ ಮೌನಕ್ಕೂ ಹಠ. ನಾನಿಲ್ಲದೆ ನೀ ಹೇಗೆ ಬರೆಯುತ್ತೀಯ ನೋಡೋಣ ಅಂತ ಅದೂ ಕಿಚಾಯಿಸುತ್ತದೆ! ಬ್ಲಾಗ್ ಮಾಡಿ ಸುಮ್ಮನೆ ಕುಳಿತುಬಿಟ್ಟರೆ ಆಗಲಿಲ್ಲ, ಬರೆಯೋದು ಯಾರು ಅಂತ ಗೆಳತಿ ಪ್ರೀತಿಯಿಂದಾನೆ ಗದರುತ್ತಿದ್ದಳು. ಬರೆಯಬೇಕೆಂದರೆ ಸುಮ್ಮನಿರಬೇಕು ಕಣೆ, ಬರೆಯೋದಕ್ಕಿಂತ ಅದೇ ಕಷ್ಟದ ಕೆಲಸ ಅಂತ ನಾನೂ ಗೊಳೋ ಅನ್ನುತ್ತಿದ್ದೆ! ಕಡೆಗೂ ಕಷ್ಟಪಟ್ಟು ಸುಮ್ಮನೆ ಕುಳಿತು ಒಂದಷ್ಟು ಗೀಚುವ ಕೆಲಸ ಶುರುವಾಗಿದೆ! ಮೌನ ನಗುತ್ತಿದೆ….

ಇವೆಲ್ಲವೂ ಕೂಡ ಮೌನದಳಗಿನ ಮಾತೇನೋ…
ಬಾಲ್ಕನಿಯ ಅಂಚಿಗೆ ನಿಂತು ಕನಸು ತುಂಬಿಕೊಳ್ಳುವ ಹೊತ್ತಲ್ಲಿ ಮತ್ತೆ ಮೌನ ಜೊತೆಯಾಗುತ್ತದೆ. ನಾನು ನನ್ನೊಳಗೊಮ್ಮೆ ಇಣುಕಿ ಬರುತ್ತೇನೆ. ಮಾತು ದೂರ ನಿಂತು ನೋಡುತ್ತದೆ. ಮೌನವಾದಷ್ಟೂ ನಾನು ತುಂಬಿಕೊಳ್ಳುತ್ತೇನೆ. ಮಾತು ನನ್ನ ಹಗುರಾಗಿಸುತ್ತದೆ…..

7 thoughts on “ಮೌನದಲ್ಲಷ್ಟು ಮಾತು….

  1. neelanjala ಹೇಳುತ್ತಾರೆ:

    ಮೌನ ಹೆಚ್ಚಿನದನ್ನು ಹೇಳುತ್ತದೆ.
    ತಣ್ಣಗಿನ ಬಾಲ್ಕನಿ ಇಷ್ಟವಾಯಿತು!

  2. ಖುಷಿ ಹೇಳುತ್ತಾರೆ:

    ನೆನಪುಗಳ ಮಾತು ಮಧುರ…

    ಆ ಹುಸಿಮುನಿಸು, ಒಂದಿಷ್ಟು ನಗು, ಬಹಳಷ್ಟು ಮಾತು, ಬೊಗಸೆ ತುಂಬ ಕನಸು,…
    ಬದುಕಿನ ಈ ಓಟದಲ್ಲಿ ಇವೆಲ್ಲ ಎಲ್ಲಿ ಬಿಟ್ಟು ಬಂದೆ ನಾನು?
    ದುಡ್ಡು, ಆಸ್ತಿ, ಅಂತಸ್ತುಗಳಲ್ಲೇ ಕಳೆದುಹೋಗಿದ್ದೇನೆ ಅನಿಸುತ್ತದೆ.
    ಯಂತ್ರಗಳ ಜೊತೆ ಕೆಲಸ ಮಾಡುತ್ತಾ ನಮ್ಮ ಮಾತು, ಯೋಚನೆ, ನಗು, ಎಲ್ಲವು ಯಂತ್ರಿಕವಾಗುತ್ತಿದೆ!

    ನಿಮ್ಮ ಈ ಪೋಸ್ಟ್ ನೋಡಿ ಎಲ್ಲ ನೆನಪಾಯಿತು. ಚೆನ್ನಾಗಿ ಬರೆದಿದ್ದೀರ.
    Keep going.

  3. ವೈಶಾಲಿ ಹೇಳುತ್ತಾರೆ:

    ಥ್ಯಾಂಕ್ಸ್ ನೀಲಾಂಜಲಾ 🙂

    ಧನ್ಯವಾದಗಳು ಖುಷಿ,
    ಹೌದು, ಬದುಕು ಯಂತ್ರಿಕವಾದಷ್ಟೂ ಭಾವನೆಗಳು ಬರಡಾಗುತ್ತವೆ. ಕನಸುಗಳಿರಬೇಕು ಕಣ್ಣತುಂಬ.
    ಬೊಗಸೆಯಲ್ಲಿ ನೆನಪುಗಳು. ಆದ್ರೆ ನಾವೆಲ್ಲಿ ಕಳೆದುಹೋಗಿದ್ದೇವೆ?
    ನಿಮ್ಮ ನೆನಪುಗಳನ್ನು ನನ್ನ ಬರಹ ಕೆದಕಿತು ಅಂತಾದರೆ ನನ್ನ ಅಕ್ಷರಗಳಿಗೂ ಸಾರ್ಥಕತೆ.
    ಪ್ರೀತಿಯಿರಲಿ.

  4. neelihoovu ಹೇಳುತ್ತಾರೆ:

    “ಕೆಂಡಸಂಪಿಗೆ” ದಿನದ ಬ್ಲಾಗಿನಲ್ಲಿ “ಕೆನೆ-ಕಾಫಿ”ಯ ಪರಿಚಯವಾಗಿದ್ದು ನೋಡಿದಿರಾ?
    http://kendasampige.com/article.php?id=450
    ಕಂಗ್ರಾಟ್ಸ್ ನಿಮಗೆ…
    ಬಾಲ್ಕನಿಯಲಿ ನೀವು ಕಾಣುವ ನೋಟಗಳು ಇಲ್ಲಿ ಹೆಚ್ಚು ಅರಳಲಿ…
    ಬಾಲ್ಕನಿಯಿದ್ದರೂ ನೀವು ನೋಡುವ ಕೋನದಲ್ಲಿ ಅಂದವನ್ನು ಕಾಣಲಾಗದ ನಮ್ಮಗಳಿಗೆಲ್ಲಾ ನಿಮ್ಮ ಬರಹದ ಮೇಲಿನ ಹೊಟ್ಟೆಕಿಚ್ಚು ತೀವ್ರವಾಗಲಿ..:)

  5. ವೈಶಾಲಿ ಹೇಳುತ್ತಾರೆ:

    ನೀಲಿಹೂವಿಗೆ,
    ಥ್ಯಾಂಕ್ಸ್…. 🙂
    ನೀವೇ ಹೀಗಂದರೆ ಹೇಗೆ? ಬೇರೆಯವರು ಹೊಟ್ಟೆಕಿಚ್ಚು ಪಡುವಂತೆ ಬರೆಯಬೇಕೆಂದರೆ ಇನ್ನೂ ಅದೆಷ್ಟು ಹಂತಗಳನ್ನು ದಾಟಬೇಕೋ! ಅಷ್ಟು ಶಕ್ತಿ ಸದ್ಯಕ್ಕಂತೂ ಇಲ್ಲ ಬಿಡಿ. 😦
    ಆದರೆ ಹೀಗೆ ನೀವೆಲ್ಲ ಕೊಡುವ ಪ್ರೋತ್ಸಾಹ ಬರೆಯುವ ಉಮೇದಿಯನ್ನಂತೂ ತುಂಬ್ತಿರೋದು ಸತ್ಯ. ನಿಮಗೆ ತುಂಬ ತುಂಬ ಥ್ಯಾಂಕ್ಸ್….ಮನಸ್ಸಿನಿಂದ..

  6. ಭಾಗ್ವತ್ರು ಹೇಳುತ್ತಾರೆ:

    ಈ ಮೌನ ಅಂದರೆ ಯಾರು? ಹೆಸರೇನು? 😛

  7. ಭಾಗ್ವತ್ರು ಹೇಳುತ್ತಾರೆ:

    ಕಾಲೆಳೆದ್ರೆ ಬೇಜಾರಿಲ್ಲ ತಾನೆ?

Leave a reply to neelanjala ಪ್ರತ್ಯುತ್ತರವನ್ನು ರದ್ದುಮಾಡಿ