ಕನಸು ಮತ್ತು ಕಥೆ

ಒಂದು ಮುಸ್ಸಂಜೆ ಯಾರ ಜೊತೆಯಿರದೆ ಒಂಟಿಯಾಗಿ ಹೋಗುತ್ತಿದ್ದ ಮೋಡವೊಂದನ್ನು ಕೇಳಿದೆ. ನಿನ್ನೊಳಗೊಂದಷ್ಟು ಕನಸು ಬಿತ್ತಲೇ? ಮಳೆಯೊಂದನ್ನೇ ಸುರಿಸಿ ಬೇಸರವಾಗಿದ್ದಿರಬೇಕು ಅದಕ್ಕೆ. ಒಪ್ಪಿಗೆ ಎಂಬಂತೆ ತಲೆಯಾಡಿಸಿತು.

ನನ್ನೊಳಗೆ ಅವಿತುಕೊಂಡಿದ್ದ ಕೆಲ ಚಂದದ ಕನಸುಗಳನ್ನು ತೆಗೆದು ಮೆಲ್ಲನೆ ಮೋಡದ ಎದೆಯೊಳಕ್ಕೆ ಇಟ್ಟೆ. ಜೊತೆಗೊಂದಷ್ಟು ನೆನಪುಗಳನ್ನೂ ಹಾಕಿದೆ. ಮೋಡ ಒಮ್ಮೆ ನಕ್ಕು ಸರಿಯಿತು. ಬರುತ್ತಿದ್ದ ಇನ್ನಷ್ಟು ಮೋಡಗಳ ಗುಂಪಿನೊಳಗೆ ಸೇರಿಕೊಂಡು ಮುನ್ನಡೆಯಿತು.

ಊರು, ಪೇಟೆ, ಪಟ್ಟಣಗಳನ್ನೆಲ್ಲ ಸವರುತ್ತ ನಡೆಯಿತು ಮೋಡ. ಆಕಾಶವನ್ನೇ ದಿಟ್ಟಿಸುತ್ತಾ ಕುಳಿತ ರೈತನನ್ನು ನೋಡಿತು. ಒಂದಷ್ಟು ಮಳೆಯ ಚೆಲ್ಲಿ ಹೋಗು ಎಂದು ಯಾವುದೊ ದೇವರ ಮೇಲೆ ಕೊಡಗಟ್ಟಲೆ ನೀರು ಸುರಿಯುತ್ತಿದ್ದವರು ಕಂಡರು. ಅಯ್ಯೋ! ಮಳೆ ಬಂದುಬಿಡುತ್ತೇನೋ ಎಂಬಂತೆ ಮೇಲೆ ನೋಡಿದ ಆಟವಾಡುತ್ತಿದ್ದ ಮಕ್ಕಳ ಕಣ್ಣಲ್ಲೊಮ್ಮೆ ಕಾಣಿಸಿಕೊಂಡಿತು ಮೋಡ. ಬಾರದ ಮಳೆಗಾಗಿನ ಅಜ್ಜಿಯರ ಶಾಪವೂ ಕೇಳಿತು…

ಮೋಡ ಎಲ್ಲ ಗಮನಿಸುತ್ತ ಮುನ್ನಡೆಯಿತು. ಆದರೆ ಎಲ್ಲಿಯೂ ನಿಲ್ಲಲಿಲ್ಲ. ಜನ ಕೂಗಿದರು. ಬೈದರು. ಅಸಹಾಯಕರಾಗಿ ಹರಕೆಯನ್ನೂ ಹೊತ್ತರು. ಮೋಡ ದೇವರ ಮಾತನ್ನೂ ಕೇಳಲಿಲ್ಲ.

ಕಡೆಗೊಂದು ದಿನ ತುಂಬ ದೂರ ಸಾಗಿದ ಮೇಲೆ ಮೋಡಕ್ಕೆ ಸುಸ್ತಾಯಿತು. ಕನಸುಗಳ ಭಾರ ಹೊರುವುದು ಇನ್ನು ಕಷ್ಟ ಅನ್ನಿಸತೊಡಗಿತು. ಮೋಡಗಳು ನಿತ್ತವು. ನಿಂತಲ್ಲೇ ತಂಪಾದವು. ಮೋಡಗಳ ಎದೆಯಿಂದ ಹನಿಗಳುದುರಿದವು. ಕಾದಿದ್ದ ಭೂಮಿಯೂ ತಣಿಯಿತು. ಜನ ಖುಷಿಯಾದರು. ಎಲ್ಲ ಮರೆತರು. ಹಾಡಿದರು. ಕುಣಿದರು….

ಇವೆಲ್ಲದರ ಮದ್ಯೆ ಕನಸುಗಳನ್ನು ಹೊತ್ತ ಮೋಡ ಸಮಯ ನೋಡಿ ನನ್ನ ಕನಸುಗಳನ್ನು ಎದೆಯಿಂದಿಳಿಸಿತು. ಕನಸುಗಳೆಲ್ಲ ಮೆಲ್ಲಗೆ ಕೆಳಗಿಳಿದವು. ಒಂದು ಕನಸು ಮಳೆಗೆ ಕೈ ಹಿಡಿದ ಪುಟ್ಟ ಹುಡುಗಿಯೊಬ್ಬಳ ಅಂಗೈಯೊಳಗೆ ಬಿತ್ತು. ಇನ್ನೊಂದು ಕನಸು ತನ್ನ ಹುಡುಗನ ಕಾಯುತ್ತ ಕುಳಿತ ಹುಡುಗಿಯ ಮಡಿಲೊಳಗೆ ಇಳಿಯಿತು. ಎಂಥ ಮಳೆ! ಎನ್ನುತ್ತ ಹೊರಬಂದ ಅಪ್ಪ, ಅಣ್ಣಂದಿರ ಒಳಗೂ ಮೆಲ್ಲಗೆ ಸೇರಿಕೊಂಡುಬಿಟ್ಟವು. ಕಿಟಕಿಯಿಂದ ಮಳೆ ನೋಡುತ್ತಾ ನಿಂತ ಗೃಹಿಣಿಯರ ಕಣ್ಣಲ್ಲೂ ಕನಸುಗಳಿಳಿದವು….

ಹಾಗೇ ಇಳಿದ ಕನಸು ಸುಮ್ಮನಾಗಲಿಲ್ಲ. ಒಂದಕ್ಕೆ ಎರಡಾಯಿತು. ಎರಡು ನಾಲ್ಕಾಯಿತು….. ಕನಸುಗಳ ಸರಪಳಿಯಾಯಿತು… ಪುಟ್ಟ ಹುಡುಗ ಮೋಡಗಳ ಮೇಲೆ ಹಾರುತ್ತಿದ್ದ. ಹುಡುಗಿ ತನ್ನ ಕನಸುಗಳೊಡನೆ ಕಳೆದುಹೋದಳು.. ಹುಡುಗರು, ಅಪ್ಪ, ಅಣ್ಣ೦ದಿರೆಲ್ಲ ಕನಸ ಗಟ್ಟಿಯಾಗಿ ಹಿಡಿದುಕೊಂಡರು…ಮನೆಯ ಹಿರಿಯರಿಗೆಲ್ಲ ಈ ಬದಲಾವಣೆ ಅಚ್ಚರಿ ಹುಟ್ಟಿಸಿ ನೋಡುತ್ತಾ ಕುಳಿತುಬಿಟ್ಟರು…. ಕನಸು ಹೆಚ್ಚಾದಂತೆಲ್ಲ ಕೆಲವರು ಹಂಚುತ್ತ ಹೊರಟರು… ಈಗ ಊರ ತುಂಬ ಕನಸ ಮೆರವಣಿಗೆ!

ಕನಸು ಕೆಲಸ ಮರೆಸೀತು ಎಂದು ಎಚ್ಚರಿಸಿದರು ಊರ ಹಿರಿಯರು. ಹೌದು ಹೌದು ಎನ್ನುತ್ತಲೇ ಮತ್ತಷ್ಟು ಕನಸು ತುಂಬಿಕೊಳ್ಳುತ್ತಾ ನಡೆದರು ಕಿರಿಯರು…. ಬದುಕು ಚಂದವಾಗಿತ್ತು. ಕನಸುಗಳಿಂದಾಗಿ ಹೊಸ ಬಣ್ಣ ಬಂದಿತ್ತು… ಮನಸು ಹಾಡಿಕೊಳ್ಳುತ್ತಿತ್ತು. ಜನ ಖುಷಿಯಾದರು…

ನಾನು ನೋಡುತ್ತಲೇ ಇದ್ದೆ. ನನ್ನೊಳಗೆ ಬಂಧಿಯಾಗಿದ್ದ, ನನಗಷ್ಟೇ ಎಂದುಕೊಂಡಿದ್ದ ಕನಸುಗಳೀಗ ಎಲ್ಲೆಡೆ ಹರಡಿಕೊಂಡಿದ್ದವು. ಕನಸು ಕಾಣುವ ಹುಚ್ಚು ನನಗೆ ಮಾತ್ರ ಎಂದುಕೊಂಡಿದ್ದೆ. ನನ್ನ ಸುತ್ತಲ ಜಗತ್ತೆಲ್ಲ ಈಗ ನನ್ನಂತೆಯೇ ಕನಸು ಕಾಣತೊಡಗಿತ್ತು. ಮಳೆಹನಿಯ ಸದ್ದಾದರೆ ಸಾಕು, ಕನಸು ಹೆಕ್ಕಿಕೊಳ್ಳಲು ಜನ ಕಾಯುತ್ತಿದ್ದರು. ನನ್ನದೆಂದುಕೊಂಡಿದ್ದ ಕನಸು ಎಲ್ಲರದೂ ಆಗಿಬಿಟ್ಟಿತು… ಖುಷಿಯಾದ ನಾನು ಕನಸು ಕಟ್ಟುತ್ತಲೇ ಹೋದೆ…..ಮತ್ತೆ ಮತ್ತೆ… ……

( ಅಬ್ಬಾ! ಸುಸ್ತಾಗಿಬಿಟ್ಟೆ!! ಅನಿಸಿದ್ದನ್ನೆಲ್ಲ ಈ……….ಷ್ಟುದ್ದಕ್ಕೆ ಯಾವತ್ತೂ ಬರೆದಿರಲಿಲ್ಲ. ಇದೇನು ಪ್ರಭಂದವಾ ಅಂದರೆ ಅಲ್ಲ. ಕಥೆಯಾ ಅಂದರೆ ಅದೂ ಅಲ್ಲ, ಪದ್ಯ. ಗದ್ಯ…ಯಾವುದೂ ಅಲ್ಲ.. ಮತ್ತ್ಯಾವುದು ಅಂತ ಕೇಳಿದರೆ ಉತ್ತರಕ್ಕೆ ಆಕಾಶ ನೋಡಿಯೇನು… ನಿಮಗೆ ಹೇಗನ್ನಿಸಿತೋ ಹಾಗೇ ಓದಿಕೊಂಡುಬಿಡಿ! ಇದೊಂದು ಸಲ….ಮತ್ತೆ ಇಂತ ಪ್ರಯತ್ನಕ್ಕೆ ಕೈ ಹಾಕಲಾರೆ.. ಪ್ರಾಮಿಸ್ 🙂 )

Advertisements

8 thoughts on “ಕನಸು ಮತ್ತು ಕಥೆ

 1. neelihoovu ಹೇಳುತ್ತಾರೆ:

  ಇದಕ್ಕೆ ಲಹರಿ, ಭಾವ ಪ್ರವಾಹ ಅನ್ನಬಹುದು.
  ಚೆನ್ನಾಗಿದೆ.
  ಬರೆಯಲಾರೆ ಅಂತ ಹೆದರಿಸುತ್ತಾ ಪ್ರಾಮಿಸ್ ಬೇರೆ ಹಾಕ್ತೀರಾ?

 2. vijayraj ಹೇಳುತ್ತಾರೆ:

  iShTu chennaagi baredu biTTu… matte intha prayatna maadalla anta praamis maadtiralla… hindakk tagoLLi bega nimma praamis….

  nim kalpane thumbaa chennaagide…
  adannu simple aagi akSharagaLalli pONisiDO chaaturyaanoo ide..

  oTnalli oMdoLLe bisi bisi filter coffee kuDidashtU khushi aaytu… nimma ee baraha Odi

 3. Pramod ಹೇಳುತ್ತಾರೆ:

  ಸೂಪರ್ ಆಗಿದೆ. 🙂
  ಮತ್ತಷ್ಟು ಕನಸು ಕಾಣಿರಿ, ಇನ್ನಷ್ಟು ಬರಹ ಪೋಣಿಸಿರಿ

 4. ವೈಶಾಲಿ ಹೇಳುತ್ತಾರೆ:

  ರಂಜಿತ್, ವಿಜಯ ರಾಜ್,
  ತಪ್ಪಾಯ್ತು ಕಣ್ರೀ….. 😦
  ಆದ್ರೆ ನಾ ಹೇಳಿದ್ದು ಇಷ್ಟೆಲ್ಲಾ ಉದ್ದ ಬರೆಯಲ್ಲ ಅಂತ ಅಷ್ಟೆ.
  ನಿಜ ಹೇಳ್ಬೇಕು ಅಂದ್ರೆ ಇದನ್ನ ಬರೆದ್ಮೇಲೆ ಪೋಸ್ಟ್ ಮಾಡಲೋ ಬೇಡವೆ ಅಂತ ಯೋಚಿಸಿದ್ದೆ. ಬ್ಲಾಗು ಅಂತಂದು ಮನಸಿಗೆ ಬಂದಿದ್ದು ಬರೀತಿರಲ್ರೀ, ಓದೋರು ನಾವಲ್ವಾ ಅಂತ ಎಲ್ಲಿ ನೀವೆಲ್ಲ ನನ್ನ ತರಾಟೆಗೆ ತಗೊಳ್ತಿರೇನೋ ಅಂದುಕೊಂಡಿದ್ದೆ! ಸಧ್ಯ ಬಚಾವಾದೆ…. 🙂
  ನಿಮ್ಮ ಪ್ರೀತಿಗೆ ಋಣಿ. ನನ್ನ ಕೂಸುಮರಿ ಗೆ ಎಷ್ಟೆಲ್ಲ ಹೊಗಳಿಕೆ ಸಿಕ್ತಿದೆ! ನಾನಂತೂ ಫುಲ್ ಖುಷ್!

  ಥ್ಯಾಂಕ್ಸ್ ಪ್ರಮೋದ್….. ಓದೋರು ಮೆಚ್ಚಿಕೊಂಡರು ಅಂದ್ರೆ ಬರೆಯೋರ್ಗೆ ಖುಷಿ ಅಲ್ವಾ?

 5. ಸಂದೀಪ್ ಕಾಮತ್ ಹೇಳುತ್ತಾರೆ:

  ಈ ಲೇಖನ ಉದ್ದ ಆಯ್ತು ಅಂತ ನಿಮಗೆ ಅನ್ನಿಸ್ತ?
  ಸ್ವಲ್ಪ ಒಳ್ಳೆಯ ಸ್ಕೇಲ್ ತಗೊಳ್ರಿ ಚೈನೀಸ್ ಸ್ಕೇಲ್ ತಗೊಂಡ್ರೆ ಹೀಗೆ measurement ಎಡವಟ್ಟಾಗೋದು!

 6. ಶಿವು.ಕೆ ಹೇಳುತ್ತಾರೆ:

  ವೈಶಾಲಿ ಮೇಡಮ್, ನಿಮ್ಮ ಕನಸಿನ ಬರವಣಿಗೆ ತುಂಬಾ ಚೆನ್ನಾಗಿದೆ. ಒಳ್ಳೇಯ ಕಲ್ಪನೆಯ ಲೇಖನ. ಇಂಥದ್ದನ್ನು ನಿಲ್ಲಿಸಬೇಡಿರಿ. ಹೀಗೆ ದೊಡ್ಡದನ್ನು ಬರೆಯುತ್ತಿರಿ……

 7. […] Posted on November 11, 2008. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ | ಕನಸು ಮತ್ತು ಕಥೆ  […]

 8. minchulli ಹೇಳುತ್ತಾರೆ:

  ತುಂಬ ಚಂದ ಇದೆ ವೈಶಾಲೀ… ಹೀಗೆ ಬರೆಯಿರಿ ಬರೆಯುತ್ತಲೇ ಇರಿ…. ಕನಸಿಲ್ಲದೆ ಬದುಕೇ ಇಲ್ಲ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s