ಹಾಡುಗಳ ಒಳಗೊಮ್ಮೆ ಕಳೆದು ಹೋಗಿ……..

ಇವತ್ತು ನನ್ನ ಬಾಲ್ಕನಿಯಲ್ಲಿ ಬೆಚ್ಚನೆ ಭಾವಗಳ ತುಂತುರು…

ಹಮ್ ತೋ ಹೇ ಪರದೇಸ್ ಮೇ
ದೇಸ್ ಮೇ ನಿಖಲಾ ಹೋಗಾ ಚಾಂದ್
ಅಪನೀ ರಾತ್ ಕಿ ಛತ್ ಪರ್ ಕಿತನಾ
ತನ್ಹಾ ಹೋಗಾ ಚಾಂದ್……………
ನನ್ನ ನೆಚ್ಚಿನ ಗಾಯಕ ಜಗಜೀತ್ ಸಿಂಗ್ ಒಂದೊಂದು ಹಾಡಿನಲ್ಲೂ ಒಂದೊಂದು ನೆನಪುಗಳನ್ನು ಕಟ್ಟಿಕೊಡುತ್ತಾನೆ. ಹಾಡುಗಳನ್ನು ಕೇಳುತ್ತಾ ಕುಳಿತರೆ ಮನದೊಳಗೆ ಸದ್ದಿಲ್ಲದ ಸಂಭ್ರಮ. ನೆನಹುಗಳ ಸರಪಳಿ..ಒಮ್ಮೆ ಕಣ್ಣ0ಚಿನಲ್ಲಿ ಹನಿ ನೀರಾದರೆ ಇನ್ನೊಮ್ಮೆ ಇವೆಲ್ಲ ನನ್ನದೇ ಭಾವಗಳೆಂಬ ಆಪ್ತತೆ.

ಎಷ್ಟೆಲ್ಲ ದಿನಗಳೇ ಕಳೆದುಹೋದವು ನಾನು ಕೂಡ ದೇಶ ಬಿಟ್ಟು ಬಂದು… ಕಳೆದ ಜಡಿಮಳೆಗೆ ಕೈಯೊಡ್ಡಿ ಕನಸುಗಳನ್ನು ಹೆಕ್ಕುತ್ತ ಕುಳಿತುಕೊಳ್ಳುತ್ತಿದ್ದ ನಾನು ಈಗ ಇಲ್ಲಿನ ಕೊರೆಯುವ ಚಳಿಗೆ ಮೈ ಮನಸುಗಳನ್ನೆಲ್ಲ ತಣ್ಣಗಾಗಿಸಿಕೊಳ್ಳುತ್ತ ಒದ್ದಾಡುತ್ತಿದ್ದೇನೆ.
ಹಬ್ಬಗಳೆಲ್ಲ ಒಂದೊಂದಾಗಿ ಸರಿದುಹೋದವು. ಮಳೆಗಾಲ ಹನಿಗಳನ್ನು ಖಾಲಿಯಾಗಿಸಿಕೊಂಡು ತಣ್ಣಗಿನ ಇಬ್ಬನಿಗೆ ದಾರಿ ಮಾಡಿಕೊಟ್ಟಾಯಿತು. ಊರಿನ ಜಗುಲಿಗಳಲ್ಲಿ ಈಗ ಅಡಿಕೆಯ ಸಿಪ್ಪೆಗಳ ಘಮವಿರಬಹುದು… ಮನೆಯ ಹಿಂದಿನ ಹೊಡಚಲಿನ ಬಿಸಿಯಿನ್ನೂ ಆರಿರಲಿಕ್ಕಿಲ್ಲ.. ಮಳೆ ಜಿರಳೆಗಳೂ ಮೌನದ ಮೊರೆ ಹೋಗಿವೆಯೇನೋ…
ಎಲ್ಲವೂ ಸರದಿಯಂತೆ ಮಾತಿಲ್ಲದೆ ಸಾಗುತ್ತಿವೆ. ಕಳೆದುಕೊಂಡ ಚಡಪಡಿಕೆ ನನ್ನದು ಮಾತ್ರವೇನೋ ಎಂದನಿಸಿ ನಾನು ಸುಮ್ಮನಾಗುತ್ತೇನೆ.

ಚಾಂದ್ ಬಿನಾ ಹರ ದಿನ್ ಯೂಹಿ ಬೀತಾ
ಜೈಸೆ ಯುಗ್ ಬೀತೇ
ಮೇರಾ ಬಿನಾ ಕಿಸ್ ಹಾಲ್ ಮೇ ಹೋಗಾ
ಕೈಸಾ ಹೋಗಾ ಚಾಂದ್..
ಬಿಟ್ಟು ಬಂದಿದ್ದು ನಾನು. ಮನೆಯಂಗಳದಲ್ಲಿ ಪಾದದ ಗುರುತಿನ್ನೂ ಆರದಿರುವ ಮುನ್ನವೇ ಇನ್ನೊಂದು ಹಸಿರ ಅಂಗಳದಲ್ಲಿ ನನ್ನ ಹೆಜ್ಜೆ ಗುರುತು ಮೂಡಿಸಲು ಹೊರಟಿದ್ದೇನೆ. ತಿರುಗಿ ನೋಡುತ್ತ ಹನಿಗಣ್ಣಾದರೆ ದಾರಿ ಮಸುಕಾದೀತಲ್ಲವೇ… ಮನಸು ಸಂತೈಸುತ್ತದೆ…
ಕಣ್ಣು ಮುಚ್ಚಾಲೆಯಾಡಿದ ಜಗುಲಿಯ ಸರಳುಗಳ ಹಿಂದೆ ನಿಂತಾಗ ಇದೇ ಹಾಡು ನನ್ನ ಹುಡುಗನ ನೆನಪು ತಂದಿತ್ತಲ್ಲವೇ… ಈಗ ಅದೇ ಹಾಡು ನನ್ನನ್ನು ಮರಳಿ ಮನೆಯಂಗಳಕ್ಕೆ ಕೊಂಡಿಯಾಗಿಸುತ್ತಿದೆ….

ಜಗಜಿತ್ ರ ಹಾಡುಗಳ ಶಕ್ತಿಯೇ ಅದು. ಯಾರದೋ ನೋವು, ಯಾರದೋ ದುಖಃ, ಯಾವುದೋ ಚಡಪಡಿಕೆ, ಮತ್ತಾರದೋ ಖುಷಿ ಎಲ್ಲವನ್ನೂ ತನ್ನದೇ ಎಂಬಂತೆ ಅನುಭವಿಸಿ ಹಾಡುವ ಅವರದ್ದು ಒಂದು ರೀತಿಯ ಪರಕಾಯ ಪ್ರವೇಶವೇ ಅನ್ನಿಸುತ್ತದೆ ನನಗೆ. ಎದೆಯತ್ತರದ ಮಗನನ್ನು ಕಳೆದುಕೊಂಡೂ, ಅದೇ ಬೇಸರದಲ್ಲಿ ಹಾಡು ನಿಲ್ಲಿಸಿದ ಮಡದಿಯನ್ನು ಸಂತೈಸುತ್ತಲೇ ಮತ್ತೆ ಗಜ್ಹಲ್ ಗಳ ನಡುವೆ ಬಂದು ನಿಂತವರು ಜಗಜಿತ್. ಎಲ್ಲವನ್ನೂ ಮನದೊಳಗೇ ಮುಚ್ಚಿಟ್ಟು ಪ್ರೀತಿಯ ಹಾಡುಗಳಿಗೆ ಜೀವ ತುಂಬಿದವರು..ವಿರಹದ ಸಾಲುಗಳಿಗೆ ಧ್ವನಿಯಾದವರು……. ನನ್ನಲ್ಲಿ ನಾನು ಕಳೆದುಹೋಗುವಂತೆ ಮಾಡುವ ಗಜ್ಹಲ್ ಗಳಿಗೆ, ಅದಕ್ಕೆ ಜೀವ ತುಂಬುವ ಜಗಜಿತ್ ರ ಕಂಠಕ್ಕೆ hats off!

ಬೀತೇ ಲಮ್ಹೇ ಕುಚ್ ಐಸೆ ಹೇ
ಖುಷ್ಬೂ ಜೈಸೆ ಹಾತ್ ನ ಆಯೇ …
ಕೋಯಿ ಮೌಸಮ್ ಐಸಾ ಆಯೇ
ಉಸಕೋ ಅಪನೀ ಸಾಥ್ ಜೋ ಲಾಯೇ….
ಎಲ್ಲ ಬಿಟ್ಟು ಬಂದರೂ ಇಲ್ಲಿ ಮತ್ತಾವುದೋ ಜೊತೆಯಾಗುತ್ತದೆ. ಸುತ್ತ ಬೀಳುವ ಹಿಮ ಹೊಸ ಜಗತ್ತು ಕಣ್ಣಲ್ಲಿಡುತ್ತದೆ. ಹುಷಾರಾಗಿ ಹೋಗಿ ಬಾ ಎಂದು ಬಸ್ಸು ಹತ್ತಿಸುತ್ತಿದ್ದ ಅಪ್ಪ ಅಮ್ಮನ ನೆನಪು ಟ್ರಾಲಿಯಲ್ಲಿ ಕುಳಿತು ಅಮ್ಮನೊಂದಿಗೆ ಸಾಗುವ, ಅಪ್ಪನೊಂದಿಗೆ ವಾಕಿಂಗು ಬರುವ ಇಲ್ಲಿನ ಮುದ್ದು ಮಕ್ಕಳನ್ನು ನೋಡಿದಾಗ ಸ್ವಲ್ಪವಾದರೂ ಮರೆಯಾಗುತ್ತದೆ… ಒಂಟಿಯಾಗಿ, ನಿರಾತಂಕವಾಗಿ ಓಡಾಡುವ ಅಜ್ಜ, ಅಜ್ಜಿಯರು ಖುಷಿ ಹುಟ್ಟಿಸುತ್ತಾರೆ.. ಪಿಜ್ಜಾ, ಬರ್ಗರ್ ಗಳ ಸಪ್ಪೆ ರುಚಿ ಮನೆಯ ದೊಸೆಯಷ್ಟಲ್ಲದಿದ್ದರೂ ಪರವಾಗಿಲ್ಲ…… ಏನೇ ಅಂದುಕೊಳ್ಳಲಿ, ಬಿಡಲಿ ಈ ದೇಶ ನನ್ನನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಂಡಾಗಿದೆ!

ಆದರೂ….
ಜಿಸ್ಮ್ ಕೆ ಬಾತ್ ನಹಿ ಥೀ ಉನ್ಕೆ
ದಿಲ್ ತಕ ಜಾನಾ ಥಾ
ಲಂಬೀ ದೂರಿ ತೈರ ಕರ್ ನೆ ಮೇ
ವಕ್ತ್ ತೋ ಲಗತಾ ಹೇ…
………………………………..
ಲಾಖ್ ಕರೆ ಖೋಶಿಷ್ ಖುಲನೆ ಮೇ
ವಕ್ತ್ ತೋ ಲಗತಾ ಹೇ…..

Advertisements

11 thoughts on “ಹಾಡುಗಳ ಒಳಗೊಮ್ಮೆ ಕಳೆದು ಹೋಗಿ……..

 1. ನೀಲಾಂಜಲ ಹೇಳುತ್ತಾರೆ:

  ವೈಶಾಲಿ,
  ಮೌನವನ್ನು ಚೆನ್ನಾಗಿ ಮಾತಿನಲ್ಲಿ ಕಟ್ಟಿಕೊಡುತ್ತಿಯ.

 2. ಶಿವು.ಕೆ ಹೇಳುತ್ತಾರೆ:

  ವೈಶಾಲಿ ಮೇಡಮ್,
  ಜಗಜಿತ್ ಹಾಡಿನ ಜೊತೆ ನಿಮ್ಮ ಇರುವಿಕೆ ಹಾಗೂ ಈ ಬರಹದ ಜಿಗಲ್ ಬಂದಿ ಇಂಥ ಚಳಿ ಸಮಯದಲ್ಲಿ ವಾವ್ ! ಸೂಪರ್ !! ಮತ್ತೇನು ಹೇಳಬೇಕೆನಿಸುವುದಿಲ್ಲ.
  ಆಹಾಂ! ನನ್ನ ಬ್ಲಾಗಿನಲ್ಲೊಂದು ಸಂತೆ ಬಗ್ಗೆ ಹೊಸ ವಿಚಾರವಿದೆ ಬನ್ನಿ.

 3. ಹೇಮಶ್ರೀ ಹೇಳುತ್ತಾರೆ:

  ಹೇ, ನಾನು ಇದೇ ಭಾವಗುಂಗಿನಲ್ಲಿದ್ದೇನೆ.
  ನಿಮ್ಮ ಬರಹ ಖುಶಿ ಕೊಟ್ಟಿತು.
  ನಂಗೆ ಜಗ್‍ಜಿತ್ರ ಹನಿ ದನಿಯ ಜತೆ ಜತೆ ಮೆಹದಿ ಹಸನ್ ಮತ್ತು ಗುಲಾಮ್ ಅಲಿ ನಶೆಯೂ ಆಪ್ತ.
  ನಾನು ಈ ಬಗ್ಗೆ ಬರೀಬೇಕು ಅಂದುಕೊಂಡಿದ್ದೆ. ಆದ್ರೆ ಭಾವ ಅಭಿವ್ಯಕ್ತಿಯಾಗಲು ತಡಕುತಿತ್ತು.
  ಸ್ವಲ್ಪ ದಿನ ಬಿಟ್ಟು ಬರೆಯುವೆ.

 4. ಭಾವಜೀವಿ ಹೇಳುತ್ತಾರೆ:

  ಇದನ್ನು ಓದಿದವನಿಗೆ ನನ್ನ ಇತ್ತೀಚಿನ ಪರಮಾಪ್ತರಾಗಿರುವ ಮೆಹದಿ ಹಸನ್ ಅತೀವವಾಗಿ ನೆನಪಾದರು! ಆತನ ಅಧ್ಬುತ ಕಂಠದ ಗಝಲ್‌ಗಳನ್ನು ಕಿವಿಯ ಮೂಲಕ ಮನಸ್ಸಿನೊಳಗೆ ತುಂಬಿಕೊಳ್ಳುತ್ತಿದ್ದೇನೆ, ಬಟ್ಟಲಿಗೆ ಮದಿರೆಯನ್ನು ನಿಧಾನವಾಗಿ ಸುರವಿಕೊಂಡಂತೆ!!
  ಕೆಲಸದ ಒತ್ತಡ ಒಮ್ಮೆಗೆ ಕಡಿಮೆಯಾದಂತೆ ಅನಿಸಿತು..! ಹಾಗೆಯೆ ಬದುಕು ಸಹನೀಯವೆನಿಸತೊಡಗಿತು..
  ಜಗಜಿತ್, ಮೆಹದಿ ಹಸನ್, ಮುನ್ನಿ ಬೇಗಮ್, ಫರೀದ ಖಾನ್ನುಮ್‌ನ ಗಝಲ್‌ಗಳು ನಮ್ಮ ಸುತ್ತಮುತ್ತಲಿನ ಜಗತ್ತನ್ನು ಆದ್ರಗೊಳಿಸುತ್ತಾ ಹೋಗುತ್ತವೆ!
  ಇವನ್ನೆಲ್ಲಾ ಈ ಸುಂದರ ಲೇಖನದ ಮೂಲಕ ನೆನಪಿಸಿದಕ್ಕೆ ನಿಮಗೆ ಧನ್ಯವಾದಗಳು…!

 5. ವೈಶಾಲಿ ಹೇಳುತ್ತಾರೆ:

  ಥ್ಯಾಂಕ್ಸ್ ನೀಲಾಂಜಲಾ,
  ಮೌನ ಮಾತಾಗಲೆಷ್ಟು ಹೊತ್ತು ಬೇಕು? ಆದ್ರೆ ಮಾತು ಮೌನವಾಗಲು ಸಮಯ ಹಿಡಿಯುತ್ತೆ ಅಲ್ವಾ? ನನಗನ್ನಿಸಿದ್ದು! 🙂

  ಶಿವೂ,
  ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನಾನು ನಿಮ್ಮ ಬ್ಲಾಗ್ ಗೆ ಆಗಾಗ ಭೇಟಿ ಕೊಡ್ತಿರ್ತೀನಿ ಬಿಡಿ.

  ಹೇಮಶ್ರೀ,
  ಬಾಲ್ಕನಿ ಗೆ ಸ್ವಾಗತ! ಹೌದು, ಗಜ್ಹಲ್ ಗಳ ಬಗ್ಗೆ ಬರೆದಷ್ಟೂ ಕಡಿಮೆಯೇ. ಅದನ್ನು ಕೇಳಿಯೇ ಅನುಭವಿಸಬೇಕು ಅಲ್ವಾ? ಖಂಡಿತ ಬರೆಯಿರಿ. ನಾನೂ ಕಾಯ್ತಿರ್ತೇನೆ.

  ಭಾವಜೀವಿ,
  ನೀವು ನನ್ನ ಬಾಲ್ಕನಿಗೆ ಭೇಟಿ ಕೊಟ್ಟಿದ್ದು ಖುಷಿ ಕೊಟ್ಟಿತು. ಗಜ್ಹಲ್ ಗಳು ಕೇವಲ ಸುಂದರ ರಾಗ, ಸಾಹಿತ್ಯವಷ್ಟೇ ಅಲ್ಲ ಅವು, ಬದುಕು, ಭಾವನೆಯ ವಿವಿಧ ಮಜಲುಗಳ ಅನಾವರಣವೂ ಕೂಡ ಅಂತನ್ನಿಸುತ್ತದೆ.
  ನೀವೆಂದಂತೆ ಯಾಂತ್ರಿಕ ಜೀವನದ ನಡುವಲ್ಲಿ ಒಂದಷ್ಟು ಸಮಾಧಾನ, ಖುಷಿ ನೀಡುವ ಸಂಗತಿಯಿದು.

 6. ಮನಸ್ವಿ ಹೇಳುತ್ತಾರೆ:

  ತುಂಬಾ ಚನ್ನಾಗಿದೆ ನಿಮ್ಮ ಬರವಣಿಗೆಯ ಶೈಲಿ, ಜಗಜೀತ್ ಸಿಂಗ್ ರ ಹಳೆಯ ಮಧುರ ಹಾಡುಗಳ ನೆನಪು ಮಾಡಿಕೊಟ್ಟದ್ದಕೆ.. ದನ್ಯವಾದಗಳು
  “ವಕ್ತ ತೋ ಲಗತಾ ಹೇ,ಅಭಿ ತೋ ಆಪಕಾ ಬ್ಲಾಗ್ ಮಿಲಾ ಹೇ,ತೈರ್ ಕರ್ ಜಾನಾ ಬಾಕಿ ಹೈ ಆಪ್ ಕಿ ಬ್ಲಾಗ್ ಕೆ ಅಂದರ್…”.

 7. ರಂಜಿತ್ ಹೇಳುತ್ತಾರೆ:

  ನನ್ನ ಅನಿಸಿಕೆ ಕೇಳಿದ್ರೆ ಹೊಗಳಿಕೆ ಅತಿಯಾಯ್ತು ಅಂತೀರಿ…
  ಅದಕ್ಕೆ ಬರೀ ಚೆನ್ನಾಗಿದೆ ಅಂತೀನಿ…

  ಜಗ್ ಜೀತ್ ಸಿಂಗ್ ಗಜಲ್ ನ ಸಾಹಿತ್ಯಾನೂ ಬರೀತಾರಾ?

 8. ವೈಶಾಲಿ ಹೇಳುತ್ತಾರೆ:

  ಮನಸ್ವಿ ಅವರೇ,
  ಸ್ವಾಗತ. ನನ್ನ ಸ್ವಗತಗಳನ್ನು ಮೆಚ್ಚಿಕೊಂಡಿದ್ದೀರಿ. ಧನ್ಯಳಾದೆ 🙂
  ಬರ್ತಾ ಇರಿ..
  ರಂಜಿತ್,
  ಹೊಗಳಿ ಹೊಗಳಿ ಹೊನ್ನ ಶೂಲಕ್ಕೆರಿಬಿಟ್ಟೇನು ಅಂತ ಭಯ ಅಷ್ಟೆ 🙂
  ಜಗಜಿತ್ ಸಿಂಗ್ ಹಾಡುತ್ತಾರೆ ಅಷ್ಟೆ. ಸಾಹಿತ್ಯ ಅವರದ್ದಲ್ಲ. ಅವರೇ ಗಝಲ್ ಸಾಹಿತ್ಯ ರಚಿಸಿದ ಬಗ್ಗೆ ಮಾಹಿತಿ ಇಲ್ಲ ನನ್ನ ಬಳಿ.

 9. ದಿಗಂತ ಹೇಳುತ್ತಾರೆ:

  Nimma Blog tumba sundaravagide barahaglu kuuda… tumba chennagive….

 10. umeshhubliwala ಹೇಳುತ್ತಾರೆ:

  ನಿಜ ಜಗಜಿತ್ಸ್ ಸಿಂಗ್ ನ್ ಧ್ವನಿಯ ಆರಾಧಕರಲ್ಲಿ ನಾನೂ ಒಬ್ಬ….
  ನಮ್ ನೋವಿಗೆ ಮಿಡಿಯುವ ಕಸುವು ಅವರಲ್ಲಿದೆ.

 11. Chetana Teerthahalli ಹೇಳುತ್ತಾರೆ:

  nAnU jagajeet ra doDDa Fanu.
  neewu archives hAki please.
  jagajeet ra mattashTu gazal gaLanna share mADkoLLi. kAytideeni 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s