ನಿನ್ನ ನೆನಪಾಗುತ್ತಿದೆ ಅನಂತಣ್ಣಾ ………….

img_2259

ಸುಮಾರು ಎರಡು ವರ್ಷಗಳ ಹಿಂದಿನ ಒಂದು ಸಂಜೆ. ಮನೆಗೆ Tata Sky ಕನೆಕ್ಷನ್ ಹಾಕಿಕೊಡಲು ಬಂದ ಆತ ಯಾರಲ್ಲೂ ಅಂಥ ಆಸಕ್ತಿ ಹುಟ್ಟಿಸಿರಲಿಲ್ಲ. ಕುರುಚಲು ಗಡ್ಡ, ಕಡಿಮೆ ಮಾತು, ನಿರ್ಲಿಪ್ತ ನಗು… ತೀರ ಮಾಮೂಲು ಎನ್ನಿಸುವ ವ್ಯಕ್ತಿತ್ವ. ಬಂದಾಗ ಎರಡು ಮಾತಾಡಿ ಕಳುಹಿಸುತ್ತಿದ್ದುದು ಬಿಟ್ಟರೆ ಆತನ ಬಗ್ಗೆ ಮನೆಯವರಾರೂ ಹೆಚ್ಚಿನ ಲಕ್ಷ್ಯ ಹಾಕಿರಲಿಲ್ಲ. ಬದುಕಿನ ನೂರಾರು ಪರಿಚಯಗಳಲ್ಲಿ ಒಂದಾಗಿ ಹೋದವ.

ಹಾಗೆ ಗುರುತಾದವ ಆಗಾಗ ಮನೆಗೆ ಬರುತ್ತಿದ್ದ. ಬಂದು ಕುಳಿತರೂ ಮಾತು ಕಡಿಮೆ, ತಾನೇ ಟೀವಿ ಹಚ್ಚುತ್ತಿದ್ದ. ಒಂದಷ್ಟು ಹೊತ್ತು ಕಂಪ್ಯೂಟರ್ ಗೇಮ್ ಆಡುತ್ತಿದ್ದ. ನಂತರ ಅಷ್ಟೇ ನಿರ್ಲಿಪ್ತತೆಯಿಂದ ಎದ್ದು ಹೋಗುತ್ತಿದ್ದ. ಅವ ಬರುತ್ತಿದ್ದುದೂ ತಿಳಿಯುತ್ತಿರಲಿಲ್ಲ, ಯಾವಾಗ ಹೋಗುತ್ತಾನೆ೦ಬುದೂ.

ನಿಧಾನಕ್ಕೆ ಸಲಿಗೆ ಬೆಳೆಯತೊಡಗಿತು. ಮನೆಯ ನೀರಿನ ಪಂಪು ಹಾಳಾದರೆ ಆತನೇ ರಿಪೇರಿ ಮಾಡುತ್ತಿದ್ದ. ಫೋನಿಗೆ ತೊಂದರೆ ಬಂದರೆ ಅವನೇ ಬರುವಂತಾಯ್ತು. ಅಡಿಗೆ ಮನೆಯಲ್ಲಿ ಗ್ರೈಂಡರು, ಮಿಕ್ಸಿ ಹಾಳಾದರೂ ಅಮ್ಮ ಆತನಿಗೇ ಹೇಳುತ್ತಿದ್ದಳು. ಅನಂತಣ್ಣ, ಫೋನು ರೀಚಾರ್ಜ್ ಮಾಡ್ಸಿಕೊಡು ಪ್ಲೀಸ್.. ಅನಂತಾ.. ಈ ಸಲ ಹಬ್ಬಕ್ಕೆ ಮನೇಲೆ ಜಿಲೇಬಿ ಮಾಡಬೇಕಿತ್ತು. ಹೇಳಿಕೊಡು… ಅನಂತ ನನ್ನ ಬೈಕ್ ರಿಪೇರಿ ಮಾಡಿಸಿ ತಂದುಕೊಡ್ತೀಯಾ? ಅನಂತಣ್ಣ, ಬಸ್ಸಿಗೆ ಲೇಟ್ ಆಗೋಯ್ತು ಪ್ಲೀಸ್ ಬಸ್ ಸ್ಟ್ಯಾಂಡ್ ವರೆಗೆ ಬಿಟ್ಟುಕೊಡು … ಒಂದಲ್ಲ ಎರಡಲ್ಲ.. ವರ್ಷ ಕಳೆವಷ್ಟರಲ್ಲಿ ಈ ಹುಡುಗ ಮನೆಯವನೇ ಆಗಿಹೋದ. ಯಾವುದೇ ತೊಂದರೆಯಿರಲಿ, ಹಬ್ಬ, ಕಾರ್ಯಗಳಿರಲಿ ಮನೆಯಲ್ಲಿ ಅನಂತ ಇರಬೇಕು. ಅಪ್ಪನಿಗೂ ಕೂಡ ಆತ ತಮ್ಮನಂತೆ, ಮನೆ ಮಗನಂತೆ ಆಗಿಹೋದ.

ಇದು ಕೇವಲ ನಮ್ಮ ಮನೆಯ ಕಥೆಯಲ್ಲ. ಸುತ್ತಮುತ್ತಲ ಅನೇಕ ಊರುಗಳ ಮನೆಗಳಲ್ಲಿ ಅನಂತ ಸ್ನೇಹಿತನಾದ. ಕಾರ್ಯಕ್ಕಾದ. ಅವಶ್ಯಕತೆಗಾದ.. ಅನಿವಾರ್ಯವಾದ…
ಆತನ ಮೂಡು ಎಷ್ಟು ಹೊತ್ತಿಗೆ ಬದಲಾಗುತ್ತಿತ್ತೋ ತಿಳಿಯುತ್ತಿರಲಿಲ್ಲ. ಎಲ್ಲರೊಡನೆ ಮಾತಾಡುತ್ತ ಕುಳಿತವ ಆಚೆ ಎಲ್ಲೋ ಒಂದು ನಿಮಿಷ ಹೋಗಿ ಬರುವಷ್ಟರಲ್ಲಿ ಎದ್ದು ನಡೆದಿರುತ್ತಿದ್ದ. ಎಷ್ಟು ಹೊತ್ತಿಗೆ ಸಿಟ್ಟು ಬಂದು ಹರಿ ಹಾಯುತ್ತಾನೋ ತಿಳಿಯದು ಮಾರಾಯರೇ ಅಂತ ಅವನ ಸುದ್ದಿ ಬಂದಾಗ ಜನ ಮಾತಾಡಿಕೊಳ್ಳುತ್ತಿದ್ದರು. ಏನೆಲ್ಲಾ ಕೆಲಸ ಮಾಡಿಕೊಟ್ಟರೂ ಕೆಲವರ ಬಳಿ ದುಡ್ಡು ಕೇಳುತ್ತಿರಲಿಲ್ಲ.. ಹೆಚ್ಚಿನವರು ಕೆಲಸ ಮಾಡಿಸಿಕೊಂಡು ದುಡ್ಡು ಕೊಡುತ್ತಿರಲಿಲ್ಲ. ಆಗಲೂ ಹೇಳಿ ಸುಮ್ಮನಾಗುತ್ತಿದ್ದನೆ ವಿನಃ ಜಗಳವಾಡುತ್ತಿರಲಿಲ್ಲ.

ಒಮ್ಮೆ ಮೂವತ್ತೋ ನಲವತ್ತೋ ಸಾವಿರ ಇವನಿಂದ ಸಾಲ ಪಡೆದವನೊಬ್ಬ ಕೊಟ್ಟ ಚೆಕ್ಕು ಬೌನ್ಸಾಯಿತು. ಸಿಟ್ಟು ಬಂದ ಈತ ಬ್ಯಾಂಕಿನಲ್ಲೇ ಚೆಕ್ ಹರಿದು ಹಾಕಿ ಬಂದಿದ್ದ! ಸಿಟ್ಟಲ್ಲಿ ಬುದ್ದಿ ಕೈಯಲ್ಲಿರುತ್ತಿರಲಿಲ್ಲ.. ಹೀಗೆ ಹೇಳುತ್ತಾ ಹೋದರೆ ಈತ ತೀರ ಸಾಮಾನ್ಯದವ. ವಿಶೇಷವೇನಿಲ್ಲ. ಆದ್ರೆ ಇಂಥ ಅನಂತಣ್ಣನ ಇನ್ನೊಂದು ಮುಖವೊಂದಿತ್ತು. ಅದ್ಭುತ ನೆನಪಿನ ಶಕ್ತಿ, ಜೊತೆಗೆ ವಿಜ್ಞಾನ, ತಂತ್ರಜ್ಞಾನದಲ್ಲಿ ತೀರದ ಆಸಕ್ತಿ. ಹೊತ್ತು ಸಿಕ್ಕಾಗೆಲ್ಲ ಆತ ಯಾರಿಗೂ ಅರ್ಥವಾಗದ ಕೆಲ ಸಂಶೋಧನೆಗಳಲ್ಲಿ ಮುಳುಗಿ ಹೋಗುತ್ತಿದ್ದ. ಅವ ಹೇಳುವ ವಿಷಯಗಳನ್ನು ಜನ ನಂಬುತ್ತಿರಲಿಲ್ಲ. ಇದೊಂಥರ ಹುಚ್ಚು ಎಂದು ಸುಮ್ಮನಾಗುತ್ತಿದ್ದರು. ಆದರೆ ಸಮಾಜದ ಯಾವ ವಿಷಯದ ಬಗೆಗೂ ಮಾತನಾಡಬಲ್ಲ ಜ್ಞಾನ ಅವನಿಗಿತ್ತು. ಹಾಗೂ ಇದು ಕೆಲವರಿಗಷ್ಟೇ ತಿಳಿದಿತ್ತು! ರಾಜಕೀಯ, ಅಡುಗೆ, ತಂತ್ರಜ್ಞಾನ, ಆಧ್ಯಾತ್ಮ…ಆತ ಕೆಲಸ ಮಾಡದ ಜಾಗ ಇರಲಿಲ್ಲ. ಆದರೆ ಆತ ಎಲ್ಲೂ ನೆಲೆ ನಿಲ್ಲುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ.

ಮನೆಯಲ್ಲಿ ತೀರದ ಬಡತನವಿತ್ತು. ಅದಕ್ಕಿಂತಲೂ ಹೆಚ್ಚಾಗಿ ಅನಂತನಿಗೆ ಪ್ರೀತಿಯ ಕೊರತೆಯಿತ್ತು. ಒಂಟಿತನ ಕಾಡುತ್ತಿತ್ತು. ತನ್ನನ್ನು ಪ್ರೀತಿಸುವವರಿಲ್ಲ ಎಂಬ ಕೊರಗಿತ್ತು. ಸಾಮರ್ಥ್ಯ, ಪ್ರತಿಭೆಯಿದ್ದರೂ ಓದು ಅರ್ಧಕ್ಕೇ ನಿಂತುಹೋದ ಬಗ್ಗೆ, ಬದುಕು ಬರಡಾದ ಬಗ್ಗೆ ತುಂಬ ಸಿಟ್ಟಿತ್ತು. ಸಿಟ್ಟಿಗಿಂತ ಹೆಚ್ಚಿನ ಅಸಹಾಯಕತೆಯಿತ್ತು. ಹೀಗೆ ಎಲ್ಲವನ್ನು ಮಾಡುವ ಬದಲು ಒಂದು ನಿರ್ದಿಷ್ಟ ಕೆಲಸ ಅಂತ ಹಿಡಿದು ನೆಲೆ ನಿಲ್ಲಬಾರದಾ, ಒಂದು ಬದುಕು ಕಟ್ಟಿಕೋ ಅನಂತ ಎಂದು ಅಮ್ಮ ಕಾಳಜಿ ತೋರಿಸಿದ ದಿನ ಅವ ಅಮ್ಮನೆದುರು ಚಿಕ್ಕ ಮಕ್ಕಳಂತೆ ಜೋರಾಗಿ ಅತ್ತುಬಿಟ್ಟಿದ್ದ. ಅಮ್ಮನೂ ಆ ಕ್ಷಣಕ್ಕೆ ಅಸಹಾಯಕಳಾಗಿಹೋಗಿದ್ದಳು.

ಇಷ್ಟೆಲ್ಲಾ ಇದ್ದರೂ ಅನಂತಣ್ಣ ನಮಗೆ ಆಪ್ತನಾದ. ಹೆಚ್ಚಿನವರು ಇದು ಸ್ವಲ್ಪ ವಿಕ್ಷಿಪ್ತ ಜನ ಬಿಡು ಎಂದು ಆತನನ್ನು ದೂರವಿಟ್ಟಿದ್ದರು. ಕೆಲವೇ ಜನರ ನಡುವೆ ಅನಂತ ಮತ್ತಷ್ಟು ಆಪ್ತನಾಗುತ್ತ ಹೋದ.
ಬದುಕಿನ ಈ ಎಲ್ಲ ಅಸಹಾಯಕತೆಗಳೊಂದಿಗೆ, ಒರಟು ವಾಸ್ತವದೊಂದಿಗೆ ಹೋರಾಡುತ್ತಲೇ ಅನಂತಣ್ಣ ಕನಸು ಕಟ್ಟುತ್ತ ಹೋದ. ಯಂತ್ರಗಳಲ್ಲಿ ತೀವ್ರ ಆಸಕ್ತಿಯಿದ್ದ ಆತನಿಗೆ ಪೆಟ್ರೋಲು, ಗಾಳಿ, ವಿದ್ಯುತ್ ಮುಂತಾದ ಈಗಿರುವ ಶಕ್ತಿ ಮೂಲಗಳನ್ನು ಹೊರತುಪಡಿಸಿ ಬೇರೊಂದು ರೀತಿಯಲ್ಲಿ ಬ್ರಹತ್ ಪ್ರಮಾಣದಲ್ಲಿ ಶಕ್ತಿ ಉತ್ಪಾದನೆ ಮಾಡುವ ಯಂತ್ರದ ಕನಸಿತ್ತು. ಜೀವನದ ಬಹುದೊಡ್ಡ ಗುರಿಯಾಗಿಯೂ ಆನಂತ ಅದನ್ನೇ ಆರಿಸಿಕೊಂಡಿದ್ದ. ಆ ನಿಟ್ಟಿನಲ್ಲಿ ಆತ ಸ್ವಲ್ಪ ಮಟ್ಟಿಗೆ ಗುರಿ ತಲುಪಿದ್ದ ಕೂಡ. ಆತನ ಮೇಲೆ ವಿಶ್ವಾಸವಿಟ್ಟ, ಆತನನ್ನು ತೀರ ಹತ್ತಿರದಿಂದ ನೋಡಿದ, ಆತನ ಪ್ರತಿಭೆಯ,ಅವನೊಳಗಿನ ಶಕ್ತಿಯ ಅರಿವಿದ್ದವರಿಗೆ ಮಾತ್ರ ಇದು ಗೊತ್ತಿತ್ತು. ಉಳಿದವರಿಗೆ ಈ ವಿಷಯ, ಅನಂತನೆಂಬ ವ್ಯಕ್ತಿತ್ವ ಎರಡೂ ಹಾಸ್ಯಾಸ್ಪದವಾಗಿದ್ದವು ………….

ಇವತ್ತಿಗೆ ಅನಂತಣ್ಣ ರಸ್ತೆ ಅಪಘಾತದಲ್ಲಿ ತೀರಿಹೋಗಿ ಮೂರು ದಿನಗಳಾಯಿತು. ಸಾಯುವಾಗ ಅವನಿಗೆ ಕೇವಲ ೩೨ ವರ್ಷ. ಆತ, ಆತನ ಬಹುದೊಡ್ಡ ಕನಸು.. ಆತನ ಕನವರಿಕೆಗಳು… ಆತನ ಹುಚ್ಚುತನಗಳು..ಎಲ್ಲವೂ ಮಣ್ಣೊಳಗೆ ಲೀನವಾಗಿ ಹೋದವು. ಬಹುಶಃ ಜೀವಮಾನದ ಎಲ್ಲ ಅನುಭವಗಳನ್ನು, ಸಾಧನೆಗಳನ್ನು ದೇವರು ಮೂವತ್ತೆರಡೇ ವರ್ಷಗಳಲ್ಲಿ ಅನಂತನ್ನನಿಗೆ ತುಂಬಿ ಕೊಟ್ಟಿದ್ದನಿರಬೇಕು. ಬೆಳಿಗ್ಗೆ ಅಪ್ಪನಿಗೆ ಸಿಕ್ಕು ಸಂಜೆ ಮನೆಗೆ ಬರುತ್ತೇನೆಂದು ಹೇಳಿಹೋದ ಅನಂತಣ್ಣ ಮರಳಿ ಬರಲಿಲ್ಲ…

ವಿಕ್ಷಿಪ್ತನಾದರೂ ಆಪ್ತನಾಗಿದ್ದ, ಮನೆಗೆ ಬಂಧುವಲ್ಲದಿದ್ದರೂ ಮನಕ್ಕೆ ಬಂಧುವಾಗಿದ್ದ ಅನಂತಣ್ಣ ಆಗಿದ್ದವ ಈ ಕ್ಷಣಕ್ಕೆ ಇಲ್ಲವೆಂಬ ಸತ್ಯ ಮನೆಯಲ್ಲಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಆತ ನಮ್ಮ ಮನೆಯಲ್ಲಿ ತಂದಿಟ್ಟಿದ್ದ DVD ಪ್ಲೇಯರ್ ಅಲ್ಲಿಯೇ ಇದೆ… ಮನೆಯ ಯಾವ ಮೂಲೆಗೆ ಹೋದರೂ ಆತ ಮಾಡಿಕೊಟ್ಟ ಕೆಲಸ ಕಾಣುತ್ತದೆ. ಮನೆ ಮನದ ತುಂಬಾ ಅವನ ನೆನಪುಗಳು ಕಾಡುತ್ತವೆ….ಇಲ್ಲೇ ಎಲ್ಲೋ ಹೋಗಿರಬೇಕು,ಈಗ ಬಂದಾನು ಬಿಡು ಅಂತಲೇ ಅನ್ನಿಸುತ್ತದೆ. ಯಾರ ಮನಸ್ಸಿಗೂ ಅನಂತ ಇನ್ನಿಲ್ಲವೆಂಬ ನಂಬಿಕೆ ಬರುತ್ತಿಲ್ಲ.

ಬದುಕಿನ ಅಸ್ಥಿರತೆ ಇಷ್ಟು ತೀವ್ರವಾಗಿ ನನ್ನ ಕಾಡಿದ್ದು ಇದು ಮೊದಲು. ಅನಂತಣ್ಣ ಇನ್ನು ಕೇವಲ ಫೋಟೋದೊಳಗಿನ ಚಿತ್ರ, ಮನದೊಳಗಿನ ನೆನಪು ಮಾತ್ರ…. ಕೇವಲ ಕಷ್ಟ, ನೋವು, ಅವಮಾನಗಳನ್ನೇ ಕಂಡ ಅನಂತಣ್ಣನಿಗೆ ಆ ಇನ್ನೊಂದು ಜಗತ್ತಾದರೂ ನೆಮ್ಮದಿ ನೀಡಲಿ. ಅನಂತಣ್ಣನ ಆತ್ಮ ಶಾಂತಿಯಿಂದಿರಲಿ…ಖುಷಿಯಿಂದಿರಲಿ……….

( ಇವೆಲ್ಲ ಅಂತಂತಣ್ಣನ ವ್ಯಕ್ತಿತ್ವದ ಕೆಲವು ಆಯಾಮಗಳಷ್ಟೇ. ಆತನನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ನಮಗೂ ಸಾದ್ಯವಾಗಿರಲಿಲ್ಲವೇನೋ ಅನ್ನಿಸುತ್ತಿದೆ. ನಾನು ನೆನಪಿಸಿಕೊಂಡಿದ್ದರಲ್ಲಿ ಅರ್ಧದಷ್ಟು ಮಾತ್ರ ಬರೆಯಲು ಸಾಧ್ಯವಾಯ್ತು. ಹೇಳುತ್ತ ಹೋದರೆ ಸಾವಿರ ಮರೆಯದ ಸಂಗತಿಗಳಿವೆ. ಆದರೆ ಈಗೆಷ್ಟು ಬೇಸರಿಸಿದರೂ, ನೆನಪಿಸಿಕೊಂಡರೂ ಅನಂತಣ್ಣ ತಿರುಗಿ ಬರಲಾರ ಎಂಬುದೂ ಅಷ್ಟೆ ನಿಜ. ಅದನ್ನು ಮನಸ್ಸಿಗೆ ತಿಳಿಹೇಳಬೇಕಿದೆ ಅಷ್ಟೆ. ಈ ಬರಹ ಅನಂತಣ್ಣನ ಮೇಲಿನ ಪ್ರೀತಿಗೆ, ಆತನಿಲ್ಲದ ದುಃಖಕ್ಕೆ, ತಿರುಗಿ ಬರಲಾರದಂತೆ ಹೊರಟು ಹೋದ ಅವನ ಮೇಲಿನ ಸಣ್ಣ ಸಿಟ್ಟಿಗೆ………….. )

Advertisements

10 thoughts on “ನಿನ್ನ ನೆನಪಾಗುತ್ತಿದೆ ಅನಂತಣ್ಣಾ ………….

 1. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಕೆಲವರು ಯಾವ ಸಂಭಂದ ಇಲ್ಲದ್ದಿದರು ನಮಗೆ ಹತ್ತಿರವಾಗುತ್ತಾರೆ. ನಮಗೇ ಗೊತ್ತಿಲ್ಲದಂತೆ ನಮಗೆ ಅವಶ್ಯಕವಾಗುತ್ತಾರೆ. ಅನಂತಣ್ಣನ ಮರಣ ನಿಜಕ್ಕೂ ವಿಷಾದಕರ, ಅನಂತಣ್ಣನ ಅನುಪಸ್ಥಿತಿಯನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ದೇವರು ನಿಮಗೆ ದಯಪಾಲಿಸಲೆಂದು ಹಾರೈಸುತ್ತೇನೆ.

 2. Raghunandana S. Adebhagi ಹೇಳುತ್ತಾರೆ:

  Tumba Chennagi bardiddira…. Koneya pyarada kone line tumba mana muttitte….

 3. jomon ಹೇಳುತ್ತಾರೆ:

  ಏನೂ ಹೇಳಲಾಗುತ್ತಿಲ್ಲ… ಅನಂತಣ್ಣನಿಗೆ ನನ್ನದೂ ಎರಡು ಕಣ್ಣಹನಿ.

 4. prakash hegde ಹೇಳುತ್ತಾರೆ:

  ತುಂಬಾ ಬೇಜಾರಾಯಿತು. ಕೆಲವರು ಹೇಗೆ ಮತ್ತು ಏಕೆ ಹತ್ತಿರ ವಾಗುತ್ತಾರೊ? ಯಾಕೆ ದೂರವಾಗುತ್ತಾರೊ..? ಗೊತ್ತಿಲ್ಲ. ಅನಂತಣ್ಣನ ಕಥೆ ಕೇಳಿದರೆ ಶಂಕರ್ ನಾಗ್ ನೆನಪಾಗುತ್ತಾರೆ.. ಅವರ ಅಗಲಿಕೆ ತಡೆದು ಕೊಳ್ಳುವ ಧೈರ್ಯ ನಿಮಗೆ ಬರಲೆಂದು ಹಾರೈಸುವೆ.
  ನೋಡಿ ಕಾಲ ಎಲ್ಲವನ್ನುಊ ಮರೆಸುತ್ತದೆ..
  “ಮರೆವು” ವರವೂ ಹೌದು….
  ಧರ್ಯ ತಂದುಕೊಳ್ಳಿ..

 5. ಸೀತಾಳಭಾವಿ ಹೇಳುತ್ತಾರೆ:

  ಕವಿತಾ ಮೂವರು ಅನನ್ತಣ್ಣನ್ದಿರನ್ನು ಕಳೆದುಕೊಂಡ ನೋವು ನನಗಿದೆ. ಮೈಸೂರಲ್ಲೊಬ್ಬ ಪುರೋಹಿತ ಗೆಳೆಯ, ಮತ್ತೊಬ್ಬಳು ನನ್ನ ವಯಸ್ಸಿಗೆ ಚೂರೂ ಹೊಂದದ ಲೆಕ್ಚರರ್ ಗೆಳತಿ, ಬೆಂಗಳೂರಲ್ಲೊಬ್ಬ ಆಟೋ ಸ್ನೇಹಿತ. ಮೂವರೂ ಒಬ್ಬಂಟಿಗರು ಅನ್ನುವುದು ವಿಶೇಷ. ಇದ್ದಕ್ಕಿದ್ದಂತೆ ಹೇಳದೆ ಕೇಳದೆ ಯಕ್ಷಗಾನ ಮುಗಿದ ಮೇಲೆ ವೇಷ ಕಳಚಿಟ್ಟು ಹೋದಂತೆ ಹೊರಟುಹೋದರು. ಏಕಾಂಗಿಗಳೇ ಏಕೆ ಹಿಗಾಗುತ್ತಾರೆ? ಇವತ್ತಿಗೂ ಉತ್ತರ ಸಿಕ್ಕಿಲ್ಲ. ನಿನ್ನ ಜೊತೆ ನನ್ನದೂ ಮೂರು ಹನಿ ಕಣ್ಣಿರು.

 6. shivu. ಹೇಳುತ್ತಾರೆ:

  ಲೇಖನ ಓದುತ್ತಿದ್ದಂತೆ ಮನಸ್ಸಿಗೆ ವಿಷಾದ ಉಂಟಾಯಿತು. ಕೆಲವರು ತುಂಬಾ ಹತ್ತಿರವಾಗುತ್ತಾರೆ. ಮತ್ತೆ ಹಾಗೆ ಮರೆಯಾಗಿಹೋಗುತ್ತಾರೆ. ಅನಂತಣ್ಣನ ಆತ್ಮಕ್ಕೆ ಶಾಂತಿ ಸಿಗಲಿ… ಓದುತ್ತಿದ್ದಾಗ ಕಣ್ಣಂಚಲ್ಲಿ ನೀರು ತುಂಬಿಬಂತು…..

 7. Manaswi Sagar ಹೇಳುತ್ತಾರೆ:

  ನಿಮ್ಮ ಬರಹ ಮನ ಕಲಕುವಂತಿದೆ.. ಹೌದು ಕೆಲವರು ನಮಗೆ ಗೊತ್ತಿಲ್ಲದಂತೆ ತುಂಬಾ ಅತ್ಮೀಯರಾಗಿ ಬಿಡುತ್ತಾರೆ, ಅವರನ್ನು ಕಳೆದುಕೊಂಡ ನೋವು ಮಾಯುವುದೇ ಇಲ್ಲ.. ಸದಾ ನೆನಪುಗಳು ಕಾಡುತ್ತಲೇ ಇರುತ್ತದೆ… ಮುಂದೇನು ಬರೆಯಲು ತೋಚುತ್ತಿಲ್ಲ.. ಅನಂತಣ್ಣನ ಆತ್ಮಕ್ಕೆ ಶಾಂತಿ ಸಿಗಲಿ

 8. laxmi machina ಹೇಳುತ್ತಾರೆ:

  hattiravaaguvudu kashta. dooradare mareyuvudu adakkintha kashta.
  agaluvikeya parithapa arivide. adre agaluvike jagada niyama.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s