ನನ್ನ ವಿರೋಧವಿದೆ…………….

terror2

ಹಿಂಸೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ………………

ಉಗ್ರಗಾಮಿಗಳಿಂದ ಭಾರತೀಯರಿಗೆ ಸಿಗುತ್ತಿರುವುದಲ್ಲ. ಕಳೆದ ಐದಾರು ದಿನಗಳಿಂದ ನನ್ನೊಳಗೆ ನಡೆಯುತ್ತಿದ್ದುದು. ಇಷ್ಟರವರೆಗೂ ನಡೆದ ಎಲ್ಲ ಭಯೋತ್ಪಾದಕ ದಾಳಿಗಳನ್ನು ಕೇಳಿ, ನೋಡಿ ಕೈಲಾಗದಂತೆ ಸುಮ್ಮನೆ ಕುಳಿತಿರುತ್ತಿದ್ದ ನಾನು ಈ ಬಾರಿ ನನ್ನ ಮಿತಿಗೆ ನಿಲುಕುವಷ್ಟಾದರೂ ಪ್ರತಿಭಟನೆ ತೋರುವ ಮನಸ್ಸು ಮಾಡಿದ್ದೇನೆ. ( ಥಾಂಕ್ಸ್ ಟು ನೀಲಾಂಜಲಾ.)

ಧರ್ಮಾಂಧತೆಯ ದಾಳಿಗೆ ಈ ಸಲ ನೂರಕ್ಕೂ ಹೆಚ್ಚು ಬಲಿ ನೀಡಿದ್ದಾಗಿದೆ. ರಾಜಕಾರಣಿಗಳನ್ನು ಬಾಯಿ ಸೋಲುವಷ್ಟು ಬೈದು ಸುಮ್ಮನಾಗಿದ್ದೇನೆ. ನಮ್ಮ ವೈಫಲ್ಯಗಳನ್ನು, ಜಡತ್ವವನ್ನು, ನಿರ್ಲಕ್ಷವನ್ನು ಎಷ್ಟು ಶಪಿಸಿಕೊಂಡರೂ ಅಷ್ಟೇ. ಬದಲಾವಣೆ ಭಾರತದ ನಿಯಮವಲ್ಲ! ಭಯೋತ್ಪಾದನೆ, ರಾಜಕೀಯದ ಮಟ್ಟಿಗೆ.

ಆದರೂ ಈ ಬಾರಿಯ ಮುಂಬೈ ಹಿಂಸಾಚಾರಕ್ಕೆ ಸಹನೆಯಿಂದಿರಲು ಮನಸ್ಸು ಖಂಡಿತ ತಯಾರಿಲ್ಲ. ದೆಹಲಿ, ಜೈಪುರ ಸರಣಿ ಸ್ಪೋಟಗಳು, ಲುಂಬಿನಿ ಗಾರ್ಡನ್, ಸಂಜೌತಾ ರೈಲು,ಮಣಿಪುರದಲ್ಲಿನ ಉಗ್ರರ ಅಟ್ಟಹಾಸ… ಮೊನ್ನೆ ಮೊನ್ನೆ ನಡೆದ ಗುಜರಾತ್, ಮಾಲಗಾಂವ್, ಬೆಂಗಳೂರಿನಲ್ಲಿನ ಸ್ಪೋಟಗಳು……ಮತ್ತೆ ಇಂದಿನ ಅಸ್ಸಾಂ ಸ್ಪೋಟ… ಸಾವಿರ ಸಾವಿರ ಜನರು ಉಗ್ರರ ದಾಳಿಗೆ ಪ್ರಾಣ ತೆತ್ತರೂ ಜೀವ ಅಮೂಲ್ಯವೆನಿಸುವುದಿಲ್ಲ. ಆ ಕ್ಷಣಕ್ಕೊಮ್ಮೆ ಸಿಡಿದು ಮತ್ತೆ ನಮ್ಮೊಳಗೆ ಮುಳುಗಿ ಹೋಗುವ ಈ ನಿರ್ಲಿಪ್ತತೆ ದೇಶವನ್ನು ಯಾರ ಕೈಲಿಡುವಂತೆ ಮಾಡುತ್ತದೋ ಗೊತ್ತಿಲ್ಲ.

ನಮ್ಮದು ಕ್ಷತ್ರಿಯರ ರಜಪೂತರ ವೀರ ಶೂರರ ಪರಂಪರೆ ಹೊತ್ತ ನಾಡು ಎಂದೆಲ್ಲ ಕಥೆ ಹೇಳುತ್ತಾ…. ಮೊಘಲರು ಹಾಗೆ ಮಾಡಿದರು, ಬ್ರಿಟೀಷರು ಇಷ್ಟು ಹಾಳುಗೆಡವಿದರು ಎಂದೆಲ್ಲ ಅಲವತ್ತುಕೊಳ್ಳುತ್ತಾ, ಭಯೋತ್ಪಾದನೆಗೆ ಧರ್ಮವಿಲ್ಲ, ಯಾರು ಮಾಡಿದರೂ ಕ್ರೌರ್ಯವೇ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾ…………….. ದೇವರೇ, ನೀನು ಯಾವ ಜಾತಿಯವನಿದ್ದರೂ ಸರಿ, ಇತಿಹಾಸಕ್ಕೆ ನೇತುಬಿದ್ದು ಜೋತಾಡಿಕೊಂಡಿರುವ ಮನಸ್ಥಿತಿಯಿಂದ ನಮ್ಮನ್ನು ಹೊರತಂದು ದಯವಿಟ್ಟು ವಾಸ್ತವದಲ್ಲಿ ಬದುಕುವ ಬುದ್ದಿ ಕೊಡು!

ಚಾಣಕ್ಯನಂತ ರಾಜತಾಂತ್ರಿಕನನ್ನು ಕೊಟ್ಟ ದೇಶ ಅಂತೆಲ್ಲ ಹೆಮ್ಮೆ ಪಟ್ಟುಕೊಳ್ಳುವ ನಾವು ಭಯೋತ್ಪಾದನೆಯಂತ ವಿಷಯದಲ್ಲಿ ವಿರೋಧಿ ದೇಶಗಳಿಗೆ ಒಂದು ಸರಿಯಾದ ಸೂಚನೆ ಮುಟ್ಟಿಸಲೂ ಹೆದರುತ್ತೇವೆ. ಒಂದು ಧರ್ಮದವರನ್ನು ಎದುರು ಹಾಕಿಕೊಂಡರೆ ವೋಟ್ ಬ್ಯಾಂಕ್ ತಪ್ಪಿ ಹೋದೀತು ಅಂತ ರಾಜಕಾರಣಿಗಳು ತಲೆಕೆಡಿಸಿಕೊಂಡರೆ, ಎಲ್ಲರ ಮದ್ಯೆ ಬದುಕುವವರು ನಾವು, ಕೆಟ್ಟದ್ದರ ವಿರುದ್ದ ಮಾತನಾಡಿದರೆ ನಮಗೇನಾದರೂ ತೊಂದರೆಯಾದೀತೇನೋ ಅಂತ ನಾವಿಲ್ಲಿ ಹೇಡಿಗಳಾಗುತ್ತೇವೆ.. ಸಾವಿರಾರು ಪ್ರಾಣ ತೆಗೆದ ಅದೇ ಉಗ್ರರ ಒತ್ತಡಕ್ಕೆ ಹಿಡಿದ ಪಾತಕಿಗಳನ್ನೂ ಬಿಡುತ್ತೇವೆ. 1989 ರಲ್ಲಿ ವಿ.ಪಿ. ಸಿಂಘರ ಆಡಳಿತಾವಧಿಯಲ್ಲಿ ಗೃಹಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸೈಯೀದ್ ‘ಮುಜಾಹಿದ್ದೀನ್’ ಸಂಘಟನೆಯ ಉಗ್ರರಿಂದ ಒತ್ತೆಯಾಳಾದ ತನ್ನ ಮಗಳನ್ನು ಬಿಡಿಸಿಕೊಳ್ಳಲಾಗಿ ಜೈಲಿನಲ್ಲಿದ್ದ ಐದು ಭಯೋತ್ಪಾದಕರನ್ನು ಬಿಟ್ಟುಬಿಟ್ಟ ಘಟನೆ ನಮಗೆಂದೂ ಕಾಡುವುದಿಲ್ಲ. ನಮ್ಮ ಹೇಡಿತನವನ್ನು ನಾವೇ ಮೆಚ್ಚಬೇಕು!

ಅಷ್ಟಕ್ಕೂ ಅವ್ಯವಸ್ಥೆಯ ವಿರುದ್ಧ ಮಾತನಾಡುವುದು ತುಂಬ ಸುಲಭ. ಎಲ್ಲೆಡೆ ಪೋಲಿಸ್ ರಕ್ಷಣೆ, ಬಿಗಿ ತಪಾಸಣೆ, ಕೆಟ್ಟದ್ದನ್ನೆಲ್ಲ ಮಟ್ಟ ಹಾಕುವುದು….ಆದರೆ ವ್ಯವಸ್ಥೆಯ ಬುಡವೇ ಕೊಳೆತಿರುವಾಗ, ಬೇರಿನಿಂದಲೇ ಸೋಂಕು ತಗುಲಿದಾಗ ಸರಿಪಡಿಸುವುದಾದರೂ ಎಲ್ಲಿಂದ? ‘ಉಗ್ರ ನಿಗ್ರಹ ದಳ’ ಮನಸ್ಸು ಮಾಡಿದರೆ ಭಯೋತ್ಪಾದಕರನ್ನು ಸದೆಬಡಿಯುವುದು ಎಷ್ಟು ಹೊತ್ತಿನ ಕೆಲಸ ಅಂತ ಕುಳಿತಲ್ಲೇ ಭಾಷಣ ಬಿಗಿಯಲು ಕಷ್ಟವೇನಿಲ್ಲ. ತಾಂತ್ರಿಕವಾಗಿ ನಾವೆಷ್ಟು ಮುಂದುವರೆದಿದ್ದೇವೆ? ಭಯೋತ್ಪಾದಕರಿನ್ನೂ ಆರ್ ಡಿ ಎಕ್ಸ್, ಎ.ಕೆ ೪೭ ಗಳ ಕಾಲದಲ್ಲಿರುವುದು ನಮ್ಮ ಪುಣ್ಯ ಅಂತಲೇ ನಮ್ಮ ನಂಬಿಕೆ! ನಾವಿರುವುದು ಯಾವ ಕಾಲದಲ್ಲಿ?? ಸುತ್ತಮುತ್ತಲ ರಾಷ್ಟ್ರಗಳೆಲ್ಲವೂ ಶಕ್ತಿಮೀರಿ ತಮ್ಮ ತಮ್ಮ ಭದ್ರತೆ ಮಾಡಿಕೊಂಡು ಕುಳಿತಿವೆ. ಭಯೋತ್ಪಾದಕರು ನಮ್ಮಲ್ಲಿನ ಶಕ್ತಿಗಳನ್ನೇ ಉಪಯೋಗಿಸಿಕೊಂಡು ನಮಗಿಂತ ಬಹುದೂರ ಹೋಗಿಯಾಗಿದೆ. ಗಮನಿಸದ ನಾವುಗಳು ದಡ್ಡರಾಗುತ್ತಿದ್ದೇವಷ್ಟೇ .

ಸಧ್ಯ, ಎಲ್ಲ ಮುಗೀತು! ಹಾಗಂತ ನಾವು ಅಂದುಕೊಂಡಿದ್ದು ಇದು ಎಷ್ಟನೇ ಸಲವೋ? ನಮಗೆ ದಾಳಿಗಳಾದಾಗ ಎಚ್ಚೆತ್ತುಕೊಳ್ಳುವುದಷ್ಟೇ ಗೊತ್ತು. ಗುಪ್ತಚರ ದಳಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಾಗಲೀ, ಅವುಗಳ ಸೂಚನೆಗಳ ಗಂಭೀರತೆಯಾಗಲೀ ಬೇಕಿಲ್ಲ. ನೆರೆ ರಾಷ್ಟ್ರಗಳು ಕೊಡುವ ಉಪಟಳಗಳನ್ನು ಸಹಿಸಿ ಗೊತ್ತೇ ವಿನಃ ಅವುಗಳಿಗೆ ಉತ್ತರ ಕೊಡುವಂತೆ ವರ್ತಿಸುವುದು ಅನಿವಾರ್ಯವಿಲ್ಲ. ಸುತ್ತ ಮೂರು ಶತ್ರು ದೇಶಗನ್ನಿತ್ತುಕೊಂಡ ಭಾರತದಂತ ದೇಶಕ್ಕೆ ಭದ್ರತೆ ಎಷ್ಟಿದ್ದರೂ ಕಡಿಮೆಯೇ ಎಂಬ ಅರಿವು ಯಾವಾಗ ನಮ್ಮನಾಳುವವರಿಗೆ ಬರುವುದೋ ದೇವರು ಬಲ್ಲ…..

ಅದರೂ ಸತ್ಯ ಎದುರಿಗಿದೆ. ಮುಂಬೈನಂತಹ ಮಿತಿಮೀರಿದ ಜನಸಾಂದ್ರತೆಯ ಪಟ್ಟಣದಲ್ಲಿ ಯಾರಿಗೆಂದು ರಕ್ಷಣೆ ಕೊಡಲಾದೀತು? ಪ್ರತಿಯೊಬ್ಬರೂ ಖಾಸಗಿ ಭದ್ರತೆಯನ್ನಿತ್ತುಕೊಂಡು ಓಡಾಡುವ ಕಾಲ ಬರಲೆಂದರೆ ನಮ್ಮಲ್ಲಿ ತೈಲ ಸಂಪತ್ತಿನ ಒರತೆಯೂ ಇಲ್ಲ! ಗಲಭೆ ನಡೆದ ಪ್ರದೇಶಗಳನ್ನು ಬಿಟ್ಟು ಉಳಿದೆಡೆ ಕಛೇರಿಗಳು, ಕಂಪನಿಗಳು ಮುಚ್ಚುವುದಿಲ್ಲ. ಹೆದರಿ ಮನೆಯಲ್ಲಿ ಕುಳಿತರೆ ಕೆಲಸ ಕೈಜಾರೀತು. ಮುಂಬೈ ನಂತಹ ಶಹರ ದಾಳಿಯ ಮರುದಿನವೂ ಎಲ್ಲ ಮರೆಮಾಚಿದಂತಿರಲು ಇನ್ನೆಂತ ಕಾರಣ ಬೇಕು?

ಹೆಚ್ಚಿನವರ ಆಕ್ರೋಶ ಭಯೋತ್ಪಾದನೆಗಿಂತಲೂ ಧರ್ಮದ ಮೇಲೆಯೇ ಎದ್ದಿದೆ. ಶಿಕ್ಷೆಗೆ ಉಗ್ರರಷ್ಟೇ ಅರ್ಹರು ಅವರನ್ನು ಸಲಹುವವರೂ ಕೂಡ. ನಮ್ಮ ಮಧ್ಯೆಯೇ ದೇಶದ್ರೋಹದ ಕೆಲಸ ನಡೆಯುತ್ತಿದ್ದರೂ ಸರ್ಕಾರ ಜಾಣ ಕುರುಡಾಗುತ್ತದೆ. ಧರ್ಮದ ಹೆಸರಲ್ಲಿ ನಾವಿತ್ತ ಹೊಡೆದಾಡಿಕೊಂಡು ಮೂರನೆಯವರಿಗೆ ಕೆಲಸ ಸುಲಭ ಮಾಡಿಕೊಡುತ್ತಾ ಸಾಗಿದ್ದೇವೆ ಎಂಬುದು ಯಾಕೆ ಅರ್ಥವಾಗುತ್ತಿಲ್ಲ? ಹಿಂದು ಮುಂದಿನ ಆಲೋಚನೆಯಿಲ್ಲದೆ ತೋಚಿದ ಹೇಳಿಕೆಗಳನ್ನು ಕೊಡುತ್ತ, ಅನಿಸಿದ್ದೆಲ್ಲ ಕಾರಿಕೊಳ್ಳುತ್ತ ಸಾಗಿದರೆ ಆಗುವ ಪರಿಣಾಮಗಳನ್ನು ಅನುಭವಿಸುವವರು ಯಾರು? ನಾವು ಅಭದ್ರರಾದಷ್ಟೂ ಶತ್ರುಗಳು ಭದ್ರಗೊಳ್ಳುತ್ತಾರೆ ಎಂಬುದೇಕೆ ನಮಗೆ ಹೊಳೆಯುವುದಿಲ್ಲ? ಯಾರ್ಯಾರ ಮೇಲೋ ಆರೋಪಗಳನ್ನು ಹೊರಿಸುತ್ತಾ ಕುಳಿತುಕೊಳ್ಳುವುದರಿಂದ ಆಗುವ ಪರಿಣಾಮ ಮತ್ತೆ ನಮ್ಮದೇ ಮೇಲೆ. ಕಳೆಯುವುದು ನಮ್ಮದೇ ಜೀವಗಳು, ನಮ್ಮದೇ ಆಸ್ತಿ, ನಮ್ಮದೇ ನೆಮ್ಮದಿ…ನಮ್ಮದೇ ಬದುಕು.

ಎಲ್ಲ ಅವ್ಯವಸ್ಥೆಗಳ ಅರಿವಿದ್ದೂ ಇನ್ನೊಬ್ಬರನ್ನು ದೂಷಿಸುತ್ತ ಕೂರುವುದರಲ್ಲಿ ಯಾವ ಅರ್ಥವಿದೆ? ಮೊದಲು ನಮ್ಮೊಳಗಿನ ಜಡತ್ವ ನೀಗಬೇಕು. ಜಾಗ್ರತಿ ಮೊದಲು ನಮ್ಮೊಳಗೆ ಮೂಡಬೇಕು. ದಾರಿ ತೋರಲು ಯಾವುದೇ ನಾಯಕನಂತೂ ಸದ್ಯಕ್ಕೆ ಕಾಣುತ್ತಿಲ್ಲ… ಹಾಗಾಗಿ ನಾವೇ ಮೊದಲ ಹೆಜ್ಜೆಯನ್ನಿಡಬೇಕು. ಹೆಜ್ಜೆಗಳು ಜೊತೆಯಾದಷ್ಟೂ ರಕ್ಷಣೆ ಸುಲಭವಾದೀತು. ವ್ಯವಸ್ಥೆಯನ್ನು ಸರಿಪಡಿಸುವ ಕನಸಾದರೂ ಬಿದ್ದರೆ ಧೈರ್ಯ ಒಟ್ಟುಗೂಡೀತು….ಮೊದಲು ಅನ್ನ…ಕೆಲಸ…ಬದುಕು. ಧರ್ಮ..ದೇವರು..ಜಾತಿ ಎಲ್ಲ ನಂತರದಲ್ಲಿ…

ಮನಸ್ಸಿರಲಿ ಇಲ್ಲದಿರಲಿ ಸಂಘಟನೆ, ಒಗ್ಗಟ್ಟು ಸದ್ಯದ ಅನಿವಾರ್ಯತೆ. ಕೇವಲ ಮಾತುಗಳಿಂದ ಬದಲಾವಣೆ ಅಸಾಧ್ಯ. ಒಂದಷ್ಟಾದರೂ ಕೃತಿಯಿರಲಿ. ವಿರೋಧಕ್ಕೆ ಸಂಕೇತವಾಗಿ ಸದ್ಯಕ್ಕೆ ಕಪ್ಪು ಪಟ್ಟಿ ಜೊತೆಗಿದೆ. ನೋವಿನ ಕಾವು ಆರುವ ಮುನ್ನ ಕೈಜೋಡಿಸೋಣ.

ಧರ್ಮ ಮೀರಿದ ದೇವರೇ,
ನಮ್ಮತನ..ನನ್ನ ದೇಶ…ನಮಗಾಗಿ ಹೋರಾಡಲು ಬುದ್ದಿ ಕೊಡು.. ಬದುಕು ನೀಡುವ ನಿನ್ನ ಹೆಸರಲ್ಲಿಯೇ ಹೊಡೆದಾಡಿ ಸಾಯಬಾರದೆಂಬ ಅರಿವು ಕೊಡು… ಮೊದಲ ಹೆಜ್ಜೆಯಿಡುವ ಧೈರ್ಯ ಕೊಡು…………..

Advertisements

6 thoughts on “ನನ್ನ ವಿರೋಧವಿದೆ…………….

 1. ನೀಲಾಂಜಲ ಹೇಳುತ್ತಾರೆ:

  ನಿಜ,
  ಧರ್ಮ ಮೀರಿದ ದೇವರೇ,
  ನಮ್ಮತನ..ನನ್ನ ದೇಶ…ನಮಗಾಗಿ ಹೋರಾಡಲು ಬುದ್ದಿ ಕೊಡು.. ಬದುಕು ನೀಡುವ ನಿನ್ನ ಹೆಸರಲ್ಲಿಯೇ ಹೊಡೆದಾಡಿ ಸಾಯಬಾರದೆಂಬ ಅರಿವು ಕೊಡು… ಮೊದಲ ಹೆಜ್ಜೆಯಿಡುವ ಧೈರ್ಯ ಕೊಡು

 2. Tejaswini ಹೇಳುತ್ತಾರೆ:

  ದೇವರಿಗೆ ಯಾವ ಧರ್ಮವೂ ಇಲ್ಲ. ದೇವರು ಹೇಳಿದ್ದು ಒಂದೇ ಮಾನವನಾಗು ಮಾನವೀಯತೆಯ ತೋರು.
  ಒಗ್ಗಟ್ಟಿನಲ್ಲಿ ಬಲವಿದೆ.

 3. ರಂಜಿತ್ ಹೇಳುತ್ತಾರೆ:

  >>ಎಲ್ಲ ಅವ್ಯವಸ್ಥೆಗಳ ಅರಿವಿದ್ದೂ ಇನ್ನೊಬ್ಬರನ್ನು ದೂಷಿಸುತ್ತ ಕೂರುವುದರಲ್ಲಿ ಯಾವ ಅರ್ಥವಿದೆ? ಮೊದಲು ನಮ್ಮೊಳಗಿನ ಜಡತ್ವ ನೀಗಬೇಕು. ಜಾಗ್ರತಿ ಮೊದಲು ನಮ್ಮೊಳಗೆ ಮೂಡಬೇಕು. ದಾರಿ ತೋರಲು ಯಾವುದೇ ನಾಯಕನಂತೂ ಸದ್ಯಕ್ಕೆ ಕಾಣುತ್ತಿಲ್ಲ… ಹಾಗಾಗಿ ನಾವೇ ಮೊದಲ ಹೆಜ್ಜೆಯನ್ನಿಡಬೇಕು<<

  ವೈಶಾಲಿ ಮೇಡಂ… ಜತೆಯಲಿ ನಾವಿದ್ದೇವೆ..

 4. shivu. ಹೇಳುತ್ತಾರೆ:

  ವೈಶಾಲಿ ಮೇಡಮ್,

  ಇಷ್ಟೆಲ್ಲಾ ಆದಮೇಲು ನಾವು ಏಕೆ ಹೀಗೆ ಇದ್ದೇವೊ ತಿಳಿಯದು. ನಮ್ಮೊಳಗೆ ಜಾಗೃತಿ ಮೂಡಬೇಕು. ನಿಮ್ಮ ಜೊತೆಯಲ್ಲಿ ನಾವಿದ್ದೇವೆ.
  ಆಹಾಂ! ನನ್ನ ಎರಡು ಬ್ಲಾಗಿನಲ್ಲೂ ಹೊಸ ಲೇಖನ ಮತ್ತು ಹೊಸ ಹೊಸ ಫೋಟೋಗಳು ಬಂದಿವೆ. ಬಿಡುವು ಮಾಡಿಕೊಂಡು ಬನ್ನಿ.

 5. ವೈಶಾಲಿ ಹೇಳುತ್ತಾರೆ:

  ನೀಲಾಂಜಲಾ,
  ಖಂಡಿತ. ಎಲ್ಲರ ಬೇಡಿಕೆ ಹೀಗೆ ಬದಲಾದಾಗಷ್ಟೇ ಏನಾದರೂ ಆದೀತು!

  ತೇಜಸ್ವಿನಿ,
  ದೇವರದ್ದು ಒಡೆದು ಆಳುವ ಬುದ್ದಿಯಲ್ಲ ರಾಜಕಾರಣಿಗಳ ಹಾಗೆ ಅಲ್ಲವೇ? ಧರ್ಮ ಜಾತಿ ಅನ್ನುತ್ತಾ ನಾವು ಹೊಡೆದಾಡಿದರೆ ಅವನಾದರೂ ಏನು ಮಾಡಿಯಾನು ಪಾಪ!
  ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ ತೇಜಸ್ವಿನಿ. ಪ್ರೀತಿಯಿರಲಿ.

  ಥ್ಯಾಂಕ್ಸ್ ರಂಜಿತ್, ಶಿವೂ
  ಅಷ್ಟು ಧೈರ್ಯ ಕೊಟ್ಟರೆ ಮೊದಲ ಹೆಜ್ಜೆಯಿಡುವ ಧೈರ್ಯ ಒಟ್ಟುಗೂಡೀತು .

 6. chandrashekhar aijoor ಹೇಳುತ್ತಾರೆ:

  Mis.Vaishaali what nonsense r u debating? Is your so called 33 crores of gods doesn’t have the power to combat against terrorist. Kannada bloggers doesn’t have minimum common sense in debating burning issue like terrorism. First people like you and your sanaatanies & vatus will go and approach your god to fight against terrorist. Is your god doesn’t have any weapon to kill those criminals. Do you know the world is laughing at your hindu gods? Now hindu gods are becomes puppets in the hands communal butchers and religious pimps.

  And finally just want to say you have many problems in writing prose. Not only you 1000 of kannada bloggers don’t have initial ideas in judging burning issue like terrorism, communalism and casteism.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s