ಕನಸು ಮಾರಾಟಕ್ಕಿದೆ……………..

ಕನಸುಗಳ ಮಾರಲಿಟ್ಟಿದ್ದೇನೆ
ಕಣ್ಣಂಚಿನ ಹನಿಯೊಂದಿಗೆ….

ನೆಮ್ಮದಿಯ ಸಂಸಾರ
ಮಧ್ಯರಾತ್ರಿಯ ನಡಿಗೆ
ಟ್ರಾಫಿಕ್ಕಿಲ್ಲದ ರಸ್ತೆ, ಕಲೆಯಿಲ್ಲದ ಬಿಳಿಯ ಜುಬ್ಬಾ
ಲಂಚವಿಲ್ಲದ ಕೆಲಸ …..
ಬಿಳಿಯಾನೆಯಾಗುತ್ತಿರುವ ಕನಸುಗಳ
ಸಾಕುವ ಶಕ್ತಿಯಿಲ್ಲ ಜೇಬಿಗೆ

ಅರೆತೆರೆದ ರೆಪ್ಪೆಗಳ ಮಧ್ಯೆ
ಪುಟ್ಟದೊಂದು ಕನಸ ಕೂರಿಸಿ
ಜಾರದಂತೆ ಕಾಯುವುದಾದರೂ ಹೇಗೆ
ಬದುಕೇ ಜೋಲಿ ಹೊಡೆಯುತ್ತಿರುವಾಗ…
ಬರುವ ನಾಳೆಗಳಿಗೆ ರಾತ್ರಿಗಳಿಲ್ಲದಿರಬಹುದು

ನಿದ್ದೆಯಲ್ಲಿರುವ ಕಂದನ ನಸುನಗು
ತಲುಪದಿರಬಹುದು ನನ್ನವರೆಗೆ
ಧರ್ಮಸ್ಪೋಟಗಳ ಸದ್ದು
ಪ್ರಿಯವಾಗಬಹುದೇನೋ ದೇವರಿಗೆ
ನಮ್ಮಂತವರಿಗಲ್ಲ

ಸುತ್ತಲ ಹೊದಿಕೆಗಳನ್ನೆಲ್ಲ ಕಿತ್ತೊಗೆದು
ಎದ್ದು ನಿಲ್ಲುವ ಮನಸು ಬಂದೀತು ಹೇಗೆ
ಕನಸು ಕಾಣುವ ಕಣ್ಣು
ತೆರೆಯಲೊಪ್ಪುತ್ತಿಲ್ಲ ವಾಸ್ತವದ ಪ್ರಖರತೆಗೆ

ನಿದ್ದೆಯಿಲ್ಲದ ರಾತ್ರಿಗಳಲ್ಲಿ
ರೆಪ್ಪೆಯಡಿಯಲ್ಲಿ ಕುಳಿತ
ಭಯದ ಕನವರಿಕೆಗಳು
ಬಂದೂಕುಗಳಾಡುವ ಮಾತ ಜೋಗುಳದಂತೆ
ಕೇಳಿಸಿಕೊಂಡರೆ ನನಗೆ ಕ್ಷಮೆಯಿಲ್ಲ

ನೀರೆರೆದು ಎರೆದು ಕೊಳೆಯುತ್ತಿವೆ ಕನಸುಗಳು
ತೆಗೆದುಕೊಳ್ಳಲಿ ಯಾರಾದರೂ
ಹರಿದು ಹಂಚಿಕೊಳ್ಳಲಿ
ಬದುಕಿಕೊಳ್ಳಲಿ ಎಲ್ಲಾದರೂ ಹೇಗಾದರೂ
ಹೊಟ್ಟೆ ತುಂಬಿದವರ ನಾಡಿನಲ್ಲಿ

ನಾನು  ಸೇರಿಕೊಳ್ಳಬೇಕಿದೆ
ಕನಸ ಕೊಲ್ಲುವವರ ನಡುವೆ
ಎದುರಾಗದಿದ್ದರೆ ಹಿಂದೆ ನಿಂತು
ಸಾವಿನ ಬೆಳೆ ಬಿತ್ತುವವರದ್ದೂ ಒಂದಷ್ಟು ಕನಸು
ಕದ್ದು ಕದಡಬೇಕಿದೆ ಆ ಕನಸುಗಳ…..

ಅಲ್ಲಿಯವರೆಗೆ….
ಕನಸುಗಳ ಮಾರಲಿಟ್ಟಿದ್ದೇನೆ
ಕಣ್ಣಂಚಿನ ಹನಿಯೊಂದಿಗೆ….

16 thoughts on “ಕನಸು ಮಾರಾಟಕ್ಕಿದೆ……………..

  1. prakash hegde ಹೇಳುತ್ತಾರೆ:

    ವೈಶಾಲಿಯವರೆ…

    ಮಿತವಾದ ಶಬ್ಧ..
    ಹಿತವಾಗಿ..ಮನತಟ್ಟುವ ಭಾವ..
    ಅತಿರೇಕವಿಲ್ಲದೆ…ಹೇಳುವ ಹಿತವಚನ ಆಪ್ತವಾಗುತ್ತದೆ…

    ತುಂಬಾ..ತುಂಬಾ…
    ಚಂದವಾಗಿ ಬರೆದಿದ್ದೀರಿ…
    ಅಭಿನಂದನೆಗಳು…

  2. ವಿಜಯರಾಜ್ ಕನ್ನಂತ ಹೇಳುತ್ತಾರೆ:

    wah wah wah…..

  3. shivu. ಹೇಳುತ್ತಾರೆ:

    ವೈಶಾಲಿ ಮೇಡಮ್,

    ಕವನ ಲಯಬದ್ದವಾಗಿ ಸರಳ ಪದದಲ್ಲಿ ಬಲು ಭಾವಾರ್ಥವನ್ನು ಅನುಭಾವಿಸುತ್ತದೆ. ಮತ್ತು ಕವನದಲ್ಲಿ ಹಿಡಿತವಿದೆ.

    “ಅರೆತೆರೆದ ರೆಪ್ಪೆಗಳ ಮದ್ಯೆ
    ಪುಟ್ಟದೊಂದು ಕನಸ ಕೂರಿಸಿ”

    ತುಂಬಾ ಇಷ್ಟವಾದ ಪದಪ್ರೋಯೋಗವಿನಿಸಿತು.

  4. ಪ್ರದೀಪ್ ಹೇಳುತ್ತಾರೆ:

    ವೈಷಾಲಿಯವರೇ, ಬಹಳ ಚೆನ್ನಾಗಿ ಬರೆದಿದ್ದೀರಿ… ಆದರೆ, ಕನಸುಗಳ ಮಾರದಿರಿ 🙂

  5. ರಂಜಿತ್ ಹೇಳುತ್ತಾರೆ:

    “ಸಾವಿನ ಬೆಳೆ ಬಿತ್ತುವವರದ್ದೂ ಒಂದಷ್ಟು ಕನಸು
    ಕದ್ದು ಕದಡಬೇಕಿದೆ ಆ ಕನಸುಗಳ…..”

    ಇಲ್ಲೇನೋ ಲಯ ಮಿಸ್ಸಾಯಿತೆ?

    “ಕನಸು ಕಾಣುವ ಕಣ್ಣು
    ತೆರೆಯಲೊಪ್ಪುತ್ತಿಲ್ಲ ವಾಸ್ತವದ ಪ್ರಖರತೆಗೆ”

    ಈ ಸಾಲು ಇಷ್ಟವಾದರೂ ಒಟ್ಟಾರೆ ನಿಮ್ಮ ಬರವಣಿಗೆ ಇದಕ್ಕಿಂತಲೂ ಹರಿತವಾದದ್ದು ಅಂತ ನಂಬುತ್ತೇನೆ.

  6. vinayaka ಹೇಳುತ್ತಾರೆ:

    tuba sogasaagide kavana. odhi kushiyaayitu annabeko, besaravaayitu annabeko gottagtaa illa.
    v.kodsara

  7. ವೈಶಾಲಿ ಹೇಳುತ್ತಾರೆ:

    ಪ್ರಕಾಶ್ ಹೆಗಡೆ, ಕಲ್ಲಾರೆ,

    ತುಂಬ ಬೇಸರದ, ಅದಕ್ಕಿಂತ ಹೆಚ್ಚಾಗಿ ಅಸಹಾಯಕ ಭಾವದಲ್ಲಿ ಬರೆದ ಕವನ ಅದು. ಅದು ನಿಮ್ಮಗಳ ಮನಸ್ಸನ್ನೂ ತಟ್ಟಿದ್ದು ಕವನದ ಸಾರ್ಥಕತೆ ಅಂದುಕೊಳ್ಳುತ್ತೇನೆ. ಪ್ರೀತಿಯಿರಲಿ.

    ವಿಜಯರಾಜ್,
    🙂

    ಶಿವೂ,
    ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಖುಷಿಯಾಯ್ತು.

    ಪ್ರದೀಪ್,
    ಥ್ಯಾಂಕ್ಸ್. ಭಾರ ಜಾಸ್ತಿಯಾದುದರಿಂದ ಮಾರುವ ನಿರ್ಧಾರ! 🙂

    ರಾಧಾಕೃಷ್ಣ ಅವರೇ,
    ಬಾಲ್ಕನಿ ಗೆ ಭೇಟಿ ಕೊಟ್ಟಿದ್ದಕ್ಕೆ ಖುಷಿಯಾಯ್ತು. ಆದ್ರೆ ಓದೋಕೆ ಆಗ್ತಿಲ್ಲ ಅನ್ನೋದು ಬೇಸರವಾ, ಸಿಟ್ಟಾ ಅಥವಾ ಆಕ್ಷೇಪವಾ ಅಂಥ ಅರ್ಥ ಆಗ್ಲಿಲ್ಲ! 🙂

    ವಿನಾಯಕ ಅವರೇ,
    ಸ್ವಾಗತ. ಕವನದ ಭಾವ ಮನಮುಟ್ಟಿತು ಅಂತಾದರೆ ನೀವು ಬೇಸರಪಟ್ಟುಕೊಂಡರೆ ತಪ್ಪಲ್ಲ ಅನ್ಸುತ್ತೆ. ಅಲ್ವಾ? 🙂

  8. Tejaswini Hegde ಹೇಳುತ್ತಾರೆ:

    ಕವನದ ಭಾವಾರ್ಥ ಹಾಗೂ ಆಶಯ ತುಂಬಾ ಇಷ್ಟವಾಯಿತು. ಕನಸುಗಳನ್ನು ಮಾರಟಕ್ಕಿಡುತ್ತಲೇ ಹೊಸ ಕನಸುಗಳ ಕೊಳ್ಳುವ ಕನಸಕಾಣುವ ಪರಿ ಬಲು ಚೆನ್ನ. ಅಂದ ಹಾಗೆ ನನ್ನ ಕನಸುಗಳೂ ಮಾರಾಟಕ್ಕಿವೆ…!

  9. ವೈಶಾಲಿ ಹೇಳುತ್ತಾರೆ:

    ಥ್ಯಾಂಕ್ಸ್ ಶ್ರೀದೇವಿ. 🙂

    ಬಾಲ್ಕನಿ ಗೆ ಸ್ವಾಗತ ತೇಜಸ್ವಿನಿಯವರೇ. ತುಂಬ ಖುಷಿಯಾಯ್ತು.
    ಇವೆಲ್ಲ ಕನಸುಗಳು ನನಸಾಗುವ ಲಕ್ಷಣಗಳಂತೂ ಸಧ್ಯಕ್ಕೆ ಕಾಣ್ತಾ ಇಲ್ಲ. ಭಾರ ಹೊರುವುದಕ್ಕಿಂತ ಮಾರುವುದು ಲೇಸಲ್ಲವೇ? 🙂 ಬರ್ತಾ ಇರಿ, ಪ್ರೀತಿಯಿರಲಿ.

  10. Avi ಹೇಳುತ್ತಾರೆ:

    ಟ್ರಾಫಿಕ್ಕಿಲ್ಲದ ರಸ್ತೆ, ಲಂಚವಿಲ್ಲದ ಕೆಲಸ… ಈ ಕನಸುಗಳನ್ನು ಮಾರಿಬಿಡಿ.. ಯೋಚಿಸೋದೂ ಸಾಧ್ಯವಿಲ್ಲ. ಮಾರಿಬಿಡಿ ಅತ್ಲಾಗೆ…

    ಕವನ ಮನ ಮುಟ್ಟಿತು.
    -ಅವಿನಾಶ್

  11. venuvinod.k.s ಹೇಳುತ್ತಾರೆ:

    ಬಿಳಿಯಾನೆಯಾಗುತ್ತಿರುವ ಕನಸುಗಳ
    ಸಾಕುವ ಶಕ್ತಿಯಿಲ್ಲ ಜೇಬಿಗೆ..

    ನೋವು ತರುವ ಸಾಲು, ಅಷ್ಟೇ ಅರ್ಥಪೂರ್ಣ ಕವನ…ನಮಗೆಲ್ಲ ಕನಸು ಮಾರುವ ಗತಿ ಬಾರದಿರಲಿ.ಬದುಕು ಕಟ್ಟುವ ಕನಸುಗಳು ಬೀಳುತ್ತಿರಲಿ

  12. skhalana ಹೇಳುತ್ತಾರೆ:

    Chennaighde Vaishali. More than anything, i was mesmerized by the snow that keeps falling.

  13. hemapowar123 ಹೇಳುತ್ತಾರೆ:

    ತಡವಾಗಿ ನಿಮ್ಮ ಬ್ಲಾಗು ನೋಡುತ್ತಿದ್ದೇನೆ ವೈಶಾಲಿ. ಈ ಕವಿತೆ ಇಷ್ಟವಾಯ್ತು. ಒಳ್ಳೆಯ ಪ್ರಯೋಗ, ಹೀಗೆ ಇನ್ನೊಂದಷ್ಟು ಬರೆಯಿರಿ. 🙂

Leave a reply to ವೈಶಾಲಿ ಪ್ರತ್ಯುತ್ತರವನ್ನು ರದ್ದುಮಾಡಿ