ಹುಟ್ಟುತ್ತದೆಲ್ಲಿ ಕವಿತೆ?
ಹೊರಟಿದ್ದೇನೆ ಹುಡುಕುತ್ತ
ಹಿತ್ತಲ ಬೇಲಿಯಾಚೆಗೆ ದಾಟಿ
ಇಳಿಯುತ್ತಿರುವ ಸೂರ್ಯನ ಸರಿಸಿ
ಎಲೆಗಳ ಮೇಲಿನ ಇಬ್ಬನಿಗಳ ಸವರಿ
ಉಂಹೂ… ಕವಿತೆಯ ಸುಳಿವಿಲ್ಲ.
ಇಲ್ಲೇ ಇದ್ದೀತು ಸುತ್ತಮುತ್ತಲೆಲ್ಲೋ
ಗೆಳೆಯ ಕೊಟ್ಟ ಮೊದಲ ಮುತ್ತಿನಲ್ಲಿ
ಮೈಗಂಟಿ ಕೂತ ದುಪಟ್ಟಾದ ನೆರಿಗೆಗಳಲ್ಲಿ
ಕೂದಲ ಸಿಕ್ಕುಗಳಲ್ಲಿ
ಹೊರಳಾಟದ ರಾತ್ರಿಗಳಲ್ಲಿ
ಇಲ್ಲ….ಸಿಗಲಿಲ್ಲ ಕವಿತೆ
ಇದ್ದಿರಬಹುದೇ ಯುದ್ಧಗಳ ನಾಡಿನಲ್ಲಿ
ಸೋತು ಸುಣ್ಣವಾದವರ ನರನಾಡಿಗಳಲ್ಲಿ
ಅಥವಾ ಗೆದ್ದವರ ಅಟ್ಟಹಾಸದಲ್ಲಿ
ಇರಲಾರದು ಬಿಡಿ ಕವಿತೆ
ಸಮರಭೂಮಿಯಲ್ಲಿ
ಪ್ರೀತಿ ಇಲ್ಲದಲ್ಲಿ ಎಲ್ಲ ಶೂನ್ಯ
ಕವಿತೆಗೇನು ಕೆಲಸ ಅಲ್ಲಿ…
ಇನ್ನೆಲ್ಲಿ ಹುಡುಕಲಿ ನಾನು
ಕನಸು ಕಳೆದುಕೊಂಡವರಲ್ಲಿ
ಬದುಕು ಕಟ್ಟುವವರಲ್ಲಿ
ಕಡಲಂಚಿನ ನಿರಂತರ ಅಲೆಗಳಲ್ಲಿ ಅಥವಾ
ಅಲೆಗಳಿಗೆದುರಾಗಿ ಈಜಿ ಬಸವಳಿಯುತ್ತಿರುವವರಲ್ಲಿ?
ಛೆ!
ಅಷ್ಟು ಸುಲಭಕ್ಕೆ ಸಿಕ್ಕರದು ಕವಿತೆ ಹೇಗಾದೀತು….
ಆದರೆ,
ಚೌಕಟ್ಟುಗಳ ಮುರಿದು ಹೊರಬರುವ ಹೊತ್ತಲ್ಲಿ
ಎಡವಿದ ಘಳಿಗೆಗಳ ಗೆದ್ದು
ಜಗದೆದುರು ನಕ್ಕ ಕ್ಷಣದಲ್ಲಿ…
ನನ್ನೊಳಗ ಮೀರಿ ನಿನ್ನೊಳಗೊಂದಾಗಿ
ಇಟ್ಟ ಹೆಜ್ಜೆಗೆ ಜಗ ಕಂಪಿಸಿದ ದಿನಗಳಂದೂ
ಕೇಳಿದಂತಿತ್ತಲ್ಲ ಕವಿತೆ ಜೀವ ತಾಳಿದ ಸದ್ದು
ಹುಡುಕಬೇಕಿಲ್ಲ ಕವಿತೆಗಳ ಇನ್ನೆಲ್ಲೋ
ಹೊಸ್ತಿಲೀಚೆಗಿನ ಧ್ವನಿಗಳಿಗೆ ಕಿವಿಯಾದರೂ ಸಾಕು
ಕದಡಿದ ಕನಸುಗಳ, ಅದುಮಿಕೊಂಡ ರಾಗಗಳ
ಧ್ವನಿಯಾಗದ ಪಿಸುಮಾತುಗಳ
ಮದ್ಯದಲ್ಲೆಲ್ಲೋ ಸಿಗಬಹುದು ಕವಿತೆ
ತೆರೆಯಬೇಕಷ್ಟೇ ಮನದ ಕಣ್ಣುಗಳ
ಸರಿಸಿಕೊಂಡು ಮನದ ಪರದೆ
ಜೀವದಾಲಾಪಗಳೆಲ್ಲ ತುಂಬಿಕೊಂಡೀತು
ಎದೆಯೊಳಗೆ..
ನನಗೆ ಕವಿತೆ ಸಿಕ್ಕಿದ್ದು ಹಾಗೆಯೇ!
nice.. liked. 🙂
ಕವಿತೆ ಹುಟ್ಟುವುದು…ಕಟ್ಟುವುದು ಕಣ್ಣರಿವಿಗೆ ಬರುವುದಿಲ್ಲ….ಅದು ಒಂದು ಅದ್ಭುತ ಪ್ರಕ್ರಿಯೆ – ಸೃಷ್ಟಿಯ ಕ್ರಿಯೆಯಷ್ಟೇ ಅಧ್ಬುತವಾದದ್ದು.
ಎಲ್ಲೋ ಅಂಕುರಿಸಿ…ಎಲ್ಲೋ ಬಿದ್ದು…ಮತ್ತೆಲ್ಲೋ ಚಿಗುರಿ..ಇನ್ನೆಲ್ಲೋ ಫಲ ಬಿಡುವ ಜೀವ ರಚನೆ. ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ನಮ್ಮೊಳಗಿನ ವಿಚಾರ.
ಅಂದವನ್ನೋ,ಚಂದವನ್ನೋ,ರಚನೆಯನ್ನೋ,ಸುವಾಸನೆಯನ್ನೋ,ರಚನೆಯನ್ನೋ…ಇನ್ನೂ ಏನೇನೋ…ಅವರವರು ತುಂಬಿಕೊಂಡಷ್ಟು….ಅಲ್ಲಿ ಅದು ಹಿಡಿಸಿದಷ್ಟು..ಅಲ್ವೇ…? ಕವಿತೆ ಎಲ್ಲೆಲ್ಲಿಯೂ ಇದ್ದಾಳೆ. ಆಕೆ ನಮ್ಮ ಬದುಕಿನ ನವರಸಗಳಲ್ಲಿ ಭಾವವನ್ನು ಭಿತ್ತಿ ಅನುಭವಿಸುವ ಭಕ್ತಿಯನ್ನು ನಮಗೆ ಬಿಟ್ಟಿದ್ದಾಳೆ, ನರ ನಾಡಿಗಳಲ್ಲಿ ಓಡಾಡಿ- ಎಲ್ಲಿ ಬೇಕು ಅಲ್ಲಿ ಆಕೆಯನ್ನು ಹಿಡಿದಿಡುವಶಕ್ತಿಯನ್ನು ಕೊಟ್ಟಿದ್ದಾಳೆ. ಒಟ್ಟಿನಲ್ಲಿ ಆಕೆ ನಮ್ಮೊಂದಿಗೆ ಸದಾ ಇರುತ್ತಾಳೆ ಹಲವು ಸಂಬಂಧಗಳಾಗಿ-ಬಂಧುವಾಗಿ. ಕವಿತೆ ಅಂದರೆ ಹಾಗೆ ಅದು ಸಿಗುವುದು ಹೀಗೆ…! ಕಣ್ಣೊಳಗೆ ಮಿಡಿದಂತೆ ದನಿಯೊಳಗೆ ಇಳಿದಂತೆ…ಒಟ್ಟಿನಲ್ಲಿ ನಿಮಗೆ ಆಕೆ ಸಿಕ್ಕಿದ್ದಂತೆ…!!!
good one
ಚೆನ್ನಾಗಿದೆ..ಇದೇ ಭಾವನೆ ಹೊರಹೊಮ್ಮುವ ಸಾಲುಗಳನ್ನು ಹಿಂದೊಮ್ಮೆ ನಾನು ಬರೆದಿದ್ದೆ..ಪುರುಸೊತ್ತಾಗುವಾಗ ನೋಡಿ…
http://venuvinod.blogspot.com/2006/10/blog-post.html
superb!!!
Goodgood
🙂
ಕವಿತೆಯ ಹುಟ್ಟಿನ ಗುಟ್ಟು ನಿಮ್ಮಿಂದ ರಟ್ಟಾಗಿದೆ. ಕವಿತೆ ತುಂಬ ಸೊಗಸಾಗಿದೆ.
-ರಾಜಣ್ಣ