ಕೆನೆ ಕಾಫಿ ಹದಗೊಂಡಿದೆ!
ಪುಟ್ಟದೊಂದು ಬಾಲ್ಕನಿ, ಮುಳುಗುತ್ತಿರುವ ಸೂರ್ಯ, ಬೊಗಸೆಯಲ್ಲಷ್ಟು ಕನಸುಗಳು, ಮುಗಿಯದ ನೆನಪುಗಳು.. ಹಿನ್ನೆಲೆಯಲ್ಲಿ ಗಜಜಿತ್ ರ ಸುಂದರ ಗಜ್ಹಲ್, ಮತ್ತು ಒಂದು ಕಪ್ ಕೆನೆ ಕಾಫಿ….
ಜೊತೆಯಲ್ಲಿ ನಾನು ನೀವು ಮತ್ತು ಅಕ್ಷರಗಳು..
ವರುಷ ಕಳೆದು ಹೋಯಿತು..
ಬ್ಲಾಗಿನ ಬಾಗಿಲು ತೆರೆದು.. ಅಕ್ಷರಗಳ ಸಲುಗೆ ಪಡೆದು.. ಓದುಗರ ಮನಸ್ಸಿಗಿಳಿದು..
ಹಾಲು ಬಿಸಿ ಮಾಡಿ, ಎರಡೇ ಎರಡು ಸ್ಪೂನ್ ಸಕ್ಕರೆ ಹಾಕಿ, ಸ್ವಲ್ಪ ಕಾಫಿ ಪುಡಿ, ಸಾಕಷ್ಟು ಕೆನೆ ಬೆರೆಸಿ ಹೆದರುತ್ತಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ನಾನಂದುಕೊಂಡಷ್ಟು ಸೂಪರ್ ಆಗಿರಲಿಲ್ಲವಾದರೂ ಅಷ್ಟೇನೂ ಕೆಟ್ಟ ಕಾಫಿ ಕೂಡ ಆಗಿರಲಿಲ್ಲ ಅಂದುಕೊಳ್ತೀನಿ. ಕಾಫಿಯ ಪರಿಮಳ ಮಾತ್ರ ಜೋರಾಗಿಯೇ ಇತ್ತು ಅನ್ನೋದು ನೀವು ಮತ್ತೆ ಮತ್ತೆ ಬಾಲ್ಕನಿಯಲ್ಲಿ ಇಣುಕಿದ್ದು ನೋಡಿ ಖಾತ್ರಿಯಾಗಿದೆ!
ಇಷ್ಟೆಲ್ಲಾ ಆಗುವ ಮುನ್ನದ ಒಂದಷ್ಟು ‘ಸೀನ್’ ಗಳನ್ನೂ ಹೇಳಿಯೇಬಿಡ್ತೇನೆ. ಚಿಕ್ಕವಳಿದ್ದಾಗಿನಿಂದಲೂ ನಂಗೆ ಅನಿಸಿದ್ದನ್ನೆಲ್ಲ ಗೀಚುವ, ಕವಿತೆಯಂತಹ ಸಾಲುಗಳನ್ನೆಲ್ಲ ಬರೆದು ಬರೆದು ಬಿಸಾಕುವ ಚಟವಿತ್ತು. ಹಾಗೂ ಅದು ನಂಗೆ ಮಾತ್ರ ಗೊತ್ತಿತ್ತು! ಯಾವತ್ತೋ ಒಂದಿನ ಒಲೆಗೆ ಹೋಗುವ ದಾರಿಯಲ್ಲಿದ್ದ ಅಂತಹ ಕವಿತೆಯೊಂದು ಅಕಸ್ಮಾತಾಗಿ ನಮ್ಮಮ್ಮನ ಕೈಗೆ ಸಿಕ್ಕು, ಅದು ನಮ್ಮನೆಯಲ್ಲೇ ಜಗಜ್ಜಾಹೀರಾಗಿ.. ನಾನು ವಿಶೇಷ ಗೌರವವೊಂದು ಸಿಕ್ಕ ಫೋಸು ಕೊಟ್ಟು ಓಡಾಡಿದ್ದು ಹಳೇ ಕಥೆ. …
ಇಷ್ಟೆಲ್ಲಾ ಆದ ಮೇಲೂ ಕವಿತೆಗಳೆಲ್ಲ ಅಡಗಿಯೇ ಕುಳಿತಿದ್ದವು. .. ನನ್ನ ಹುಡುಗ ಮನಸ್ಸಿನೊಳಗೆ ಎಂಟ್ರಿ ಕೊಡುವ ತನಕ!
ನಂತರ ಕವಿತೆಗಳೆಲ್ಲ ಹನಿಗಳಾಗಿ ಆ ಹನಿಗಳೆಲ್ಲ sms ಗಳಾಗಿ…. ಈಗದು ಫ್ಲಾಶ್ ಬ್ಯಾಕ್! 🙂
ಇಷ್ಟೆಲ್ಲಾ ಕಂತೆ ಪುರಾಣದ ನಂತರ ಮದುವೆಯೂ ಆಯ್ತು. ಇನಿಯ ‘ಪತಿ’ಯಾದ. ಪಟ ಪಟ ಮಾತಾಡಿಕೊಂಡಿದ್ದ ನಾನು ಮನೆಯಲ್ಲಿ ಒಬ್ಬಳೇ ‘ಬೋಲ್ತಿ ಬಂದ್’ ಸ್ಥಿತಿಯಲ್ಲಿ ಕುಳಿತುಬಿಟ್ಟೆ. ಮಾತೆಲ್ಲ ಕರಗಿ ಮೌನ ಮೊದಲಾಯ್ತು. ನನ್ನ ಮನದ ಬಾಗಿಲಿಗೆ ಇಣುಕಿ ಬೋರಾಗಬೇಡ ಪ್ರಿಯೆ ಅಂದ ನನ್ನವ ಬ್ಲಾಗಿನ ಬಾಗಿಲು ತೆರೆಸಿ ಮತ್ತಷ್ಟು ಮೌನವಾದ. ನಂತರದಲ್ಲಿ ಮಾತಾಡಿದ್ದೆಲ್ಲ ನಾನು ನೀವು ಮತ್ತು ನನ್ನ ಬಾಲ್ಕನಿ!
ಹಾಗಾಗಿ ಮೊದಲ thanx ನನ್ನವನಿಗೆ, ಜೊತೆಗೆ, ಮಾಡಿಟ್ಟ ಕಾಫಿ ಕೊಡಲು ಹಿಂಜರೀತಾ ಕೂತಿದ್ದ ನನ್ನ ಏಳಿಸಿ ಬಾಲ್ಕನಿಗೆ ಕಳಿಸಿದ ಗೆಳತಿ ಸೌಪರ್ಣಿಕ ,ಗೆಳೆಯ ಸೀತಾಳಭಾವಿಗೆ ಹಾಗೂ ಎಷ್ಟೇ ಕೆಟ್ಟ ಕಾಫಿ ಕೊಟ್ಟರೂ ಬೇಸರಿಸದೆ ಕುಡಿದ ನಿಮಗೆ ತುಂಬಾ ತುಂಬಾ ಪ್ರೀತಿಯ ಥ್ಯಾಂಕ್ಸು !
ಇವೆಲ್ಲದರ ಮಧ್ಯೆ ಮತ್ತೆ ನನ್ನ ಬಾಲ್ಕನಿ ಬದಲಾಗಿದೆ.
ಪುಟ್ಟದೊಂದು ಕಪ್ ಕೆನೆ coffee ಮಾಡಿಕೊಂಡು ಸವಿಯುತ್ತ ಕೂರೋಣ ಅಂದುಕೊಳ್ಳುತ್ತಿರುವಾಗಲೇ ಬಾಲ್ಕನಿಯ ಬಾಗಿಲು ತೆರೆಯಲೂ ಪುರುಸೊತ್ತಿಲ್ಲದಂತೆ ಮತ್ತೆ ದೇಶ ಬಿಟ್ಟು ಹಾರಿ ಬಂದಿದ್ದೇನೆ 😦
ಯುರೋಪಿನ ಚಳಿಯಲ್ಲಿ ಗಡಗಡ ನಡುಗುತ್ತ ಬ್ಲಾಗಿನ ಬಾಗಿಲು ತೆರೆದ ನಾನು ಮರಳಿ ನನ್ನೂರಿಗೆ ಬಂದ ಖುಷಿಯಲ್ಲಿ ಇರುವಾಗಲೇ ಮತ್ತೆ ಸಮುದ್ರ ದಂಡೆಯ ದೇಶಕ್ಕೆ ಬಂದು ಕುಳಿತಾಗಿದೆ. ಸಮುದ್ರ ನನ್ನ ಪ್ರೀತಿಯ ಸಂಗತಿ ಕೂಡ . ಖುಷಿಯೇನಂದರೆ ನನ್ನೂರಲಿ ಮುಚ್ಚಿದ್ದ ಬ್ಲಾಗಿನ ಬಾಗಿಲು ಮತ್ತೆ ಇಲ್ಲಿ ತೆರೆದುಕೊಳ್ಳುತ್ತದೆಂಬುದು. ಮೌನದಲ್ಲಿ ಅಕ್ಷರಗಳು ಜೊತೆಯಾದಷ್ಟು ಇನ್ನಾರೂ ಜೊತೆಯಾಗಲಿಕ್ಕಿಲ್ಲ ಅಲ್ಲವೇ?
ನಿಜ ಹೇಳಬೇಕೆಂದರೆ ಬ್ಲಾಗಿಗೆ ವರುಷ ತುಂಬಿ ವಾರ ಕಳೆದುಹೋಯಿತು. ಹಾಗೂ ನಾನಿದನ್ನ ಮರೆತಿದ್ದೆ. ವರ್ಷ ಪೂರೈಸಿದ್ದು ಸಾಧನೆಯೇನು ಅಲ್ಲವಾದರೂ ಎಲ್ಲೋ ಕುಳಿತಿದ್ದ ನನಗೆ ಬರಹಗಳು ಜೊತೆಯಾಗಿದ್ದು, ಮನಸಿನ ಮೂಲೆಯಲ್ಲಿ ಅಡಗಿದ್ದ ಭಾವಗಳನ್ನೆಲ್ಲ ಅಕ್ಷರಕ್ಕಿಳಿಸಿದ್ದು, ನಿಮ್ಮೊಡನೆ ಹಂಚಿಕೊಂಡಿದ್ದು, ಎಲ್ಲಕ್ಕೂ ಹೆಚ್ಚಾಗಿ ನೀವದನ್ನು ತುಂಬು ಪ್ರೀತಿಯಿಂದ ಮನದಾಳಕ್ಕಿಳಿಸಿಕೊಂಡಿದ್ದು ನನಗೆ ತುಂಬಾ ಖುಷಿಕೊಟ್ಟ ಸಂಗತಿ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳೋದು ಕರ್ತವ್ಯ ಕೂಡ. ಅಲ್ವೇ? ಥ್ಯಾಂಕ್ಸ್ ಮತ್ತೊಮ್ಮೆ.
ಈ ಪ್ರೀತಿ ನಮ್ಮೊಡನೆ ಸದಾ ಇರಲಿ. ಮಳೆಯ ನಂತರದ ತಂಪಿನಂತೆ.. ರಾತ್ರಿಯ ಸುಂದರ ಕನಸುಗಳಂತೆ…ಕಾಫಿಯ ಘಮದಂತೆ….
-ವೈಶಾಲಿ.