ಒಂದು ಸಡಗರದ ಸೂರ್ಯಾಸ್ತ…..

ಮಲಗು ಮಲಗೆನ್ನ ಮರಿಯೇ

ಬಣ್ಣದ ನವಿಲಿನ ಗರಿಯೇ…….

ಎಲ್ಲಿಂದ ಬಂದೆ ಈ ಮನೆಗೆ

ನಂದನ ಇಳಿದಂತೆ ಧರೆಗೆ…….

ಹಾಡು ಕೇಳುತ್ತಲೇ ಇದೆ ಮೆಲ್ಲಗೆ …..ಮಗು ನಿದ್ದೆ ಹೋಗಿದೆ… ರಾತ್ರಿಯೂ ನಿದ್ದೆಗಣ್ಣಲ್ಲಿದೆ…..

ಕತ್ತಲೆಂದರೆ ಕತ್ತಲೇ.. ಅದು ನಿಯಾನ್ ದೀಪಗಳ ಹಿಂದಿನ ನಸು ಹಳದಿ ಕತ್ತಲಲ್ಲ. ಪಟ್ಟಣದ ರಸ್ತೆ ತುದಿಯ ಬಾರಿನ ಮಬ್ಬುಗತ್ತಲಲ್ಲ. ಹೊಸ್ತಿಲೀಚೆಗಿನ ಮಧ್ಯ ಒಳದಲ್ಲಿ ನೆಪಮಾತ್ರಕ್ಕೆ ಉರಿಯುವ ದೇವರ ದೀಪದ ನಿರಾಳ ಕತ್ತಲೂ ಅಲ್ಲವೇ ಅಲ್ಲ. ಚಿಲಕ ಸರಿಸಿ, ಬಾಗಿಲ ಇಷ್ಟೇ ಇಷ್ಟು ಅಡ್ದಾಗಿಸಿ ಮರೆಯಾಗಿಸುವ ನೆರಳಿನಂತಹ ಕಪ್ಪೂ ಅಲ್ಲ. ಅದು ಹೆಸರು ಕೇಳಿದರೇ ಬೆಚ್ಚಿ ಬೀಳಿಸುವ ಕತ್ತಲು. ರಾತ್ರಿಯೆದ್ದು ಬಚ್ಚಲ ಮನೆಯ ದೀಪ ಹಾಕುವ ಮುನ್ನ ಗಬಕ್ಕನೆ ಹಿಡಿದುಬಿಟ್ಟೇನೆನ್ನುವ ಕಡುಗಪ್ಪು.

ರಾತ್ರಿಯಿಡೀ ಒದರಾಡುವ ಮಳೆ ಜಿರಳೆಗಳೂ ಭಯ ಹುಟ್ಟಿಸಿಕೊಂಡು ಸುಮ್ಮನಾಗುವಂಥ ಕರಾಳ ಕತ್ತಲು. ಅತ್ತರೆ ಹಿಡಿದು ಕತ್ತಲೆ ಕೋಣೆಗೆ ಬಿಡುವೆನೆಂದಾಗ ಅವಿತುಕೊಳ್ಳುವ ಮಗುವಿನ ಕಣ್ಣಿನಲ್ಲಿ ಕಾಣುವ ಭಯದ ಕಾರ್ಗತ್ತಲು…. ಬೆಳಕಿನ ಮನೆಯಿಂದ ಸೂರ್ಯ ಈಚೆ ಕಾಲಿಡುವ ತಾಸಿಗೂ ಮೊದಲು ಇಬ್ಬನಿಯ ತಂಪೂ ಸೇರಿ ತಣ್ಣಗಾಗಿರುವ ರಾತ್ರಿ. ಊರ ದಾರಿಗಳೆಲ್ಲ ಇನ್ನೆಂದೂ ಏಳದಂತೆ ಮಲಗಿ ತಟಸ್ಥಗೊಳ್ಳುವ ಹಾಗೆ. ಅಥವಾ ಹಾಗೆಂದುಕೊಳ್ಳಲೂ ಬೆಳಕು ಸ್ವಲ್ಪವಾದರೂ ಬೇಕೇ ಬೇಕು. ಇಲ್ಲಿ ದಾರಿಗಳೇ ಕತ್ತಲಲ್ಲಿ ಕರಗಿ ಹೋದಂತೆ.

ಹಾಸಿಗೆಯಿಂದೆದ್ದು ಕುಳಿತರೆ ಅಸ್ತಿತ್ವ ನನಗೊಬ್ಬಳಿಗೆ ಮಾತ್ರ ಎನ್ನಿಸುವಂತೆ. ಇನ್ನೆಂದಿಗೂ ನಸುಕು ಹರಿಯುವುದೇ ಇಲ್ಲವೇನೋ ಎಂಬ ಹಾಗೆ. ಎಲ್ಲೋ ಪಿಸುಗುಡುವ ಸದ್ದು.. ಇನ್ನೆಲ್ಲೋ ನರಳಾಟ. ಕತ್ತಲ ರಾಜ್ಯಕ್ಕೆ ಕಾಲಿಟ್ಟವನೇ ದೊರೆ.

ನಿದ್ದೆ ಮರುಳಲ್ಲಿ ನಗಲು

ಮಂಕಾಯ್ತು ಉರಿಯುವ ಹಗಲು……

ಕತ್ತಲೆಂದರೆ ನಿರಾಳತೆ. ಸದ್ದೆಲ್ಲ ಅಡಗಿ, ಮೌನ ಮೊದಲಾಗಿ ಮನಸು ಖಾಲಿ ಖಾಲಿ. ಹಾಗೆಯೇ ಮುಂದುವರೆದರೆ ನೆನಪುಗಳ ಸರಣಿ. ಕತ್ತಲೆಂದರೆ ಏನೆಲ್ಲ. ಹಾಗೂ ಕತ್ತಲೆಂದರೆ ಎಲ್ಲವೂ ಅಲ್ಲ!

ಹೀಗೆ ನೆನಪುಗಳ ಪರದೆ ಬಗೆದು ಹೊರಗೆ ಕಾಲಿಟ್ಟಿದ್ದೇ ಇಟ್ಟಿದ್ದು. ಮತ್ತಿನ್ನೆಂದೂ ಮುಖ ತೋರದಂತೆ ಕತ್ತಲು ಮೂಲೆ ಸೇರಿದೆ. ಈಗೇನಿದ್ದರೂ ಬೆಳಕಿನ ಸಾಮ್ರಾಜ್ಯ. ಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದ ಹಾಗೆ ಕಣ್ಣು ಕೋರೈಸುವ ದೀಪಗಳು. ಕತ್ತಲಿಗೇ ತನ್ನ ಅಸ್ತಿತ್ವದ ಸಂಶಯ ಹುಟ್ಟಿಸುವ ಹಾಗೆ.

ಸಂಜೆಯ ಸುಳಿವು ಸಿಗುತ್ತಿದ್ದಂತೆಯೇ ಒಂದೊಂದಾಗಿ ಬೆಳಕಿನ ಮೆರೆವಣಿಗೆ. ಮೆಲ್ಲಗೆ ಹೆಜ್ಜೆಯಿಟ್ಟು ದಾರಿಗಳ ಆಚೀಚೆ, ಮನೆಗಳ ಮೂಲೆ ಮೂಲೆ …. ಕಪ್ಪು ಕಡಲಾಚೆಯ ಆಳವನ್ನೂ ಬಿಡದೆ ಮೆಲ್ಲಗೆ ಆವರಿಸುತ್ತದೆ. ಕಣ್ಣುಗಳ ಒಳ, ಹೊರ ಹೊಕ್ಕು ಮೋಸಗೈಯ್ಯುತ್ತಿದೆ.

ಇಲ್ಲಿ ಎಲ್ಲವೂ ಬಟಾಬಯಲು. ಕತ್ತಲ ಅರಮನೆಯ ಪ್ರತಿ ಹೆಜ್ಜೆಯೂ ದಾಖಲು. ಏನನ್ನೂ ಮುಚ್ಚಿಡುವ ಸುಖವಿಲ್ಲ. ಇಂಚಿಂಚೂ ಬಿಡದೆ ಬಯಲಾಗಿ, ಬೆತ್ತಲಾಗಿ ಬರಿದಾಗಿಸಿಬಿಡುವ ಬೆಳಕು!

ಕೈಕಾಲು ತೊಳೆದು ದೀಪ ಹಚ್ಚಿ, ಕಾಣದ ದೇವರ ನೆನೆಯುವ, ಹಸಿರು ಹಾಸಿನಿಂದ ಹೊಡಚಲಿನೆಡೆಗೆ ನಡೆಯುವ, ಹೊಲಿಗೆ ಬಿಟ್ಟ ಪಾಟೀಚೀಲ ಅಮ್ಮನಿಗೆ ತೋರಿಸುವ ಸುಂದರ ಮುಸ್ಸಂಜೆ ಇಲ್ಲೇ ಎಲ್ಲೋ ಕಳೆದು ಹೋಗಿದೆ!

ಅವತ್ತಿನ ಕೊನೆಯ ಸಿಗರೇಟಿನ ಹೊಗೆಯನ್ನು ಸ್ವಲ್ಪ ಹೆಚ್ಚೇ ಒಳಗೆಳೆದುಕೊಂಡು ಮನೆಗೆ ನಡೆವ ಮೀಸೆಯಿನ್ನೂ ಮೂಡದ ಪೋರ, ದಿನದ ಲೆಕ್ಕದ ಪಟ್ಟಿ ತೆರೆದು ಹೆಚ್ಚುತ್ತಲೇ ಹೋಗುವ ಖರ್ಚು ಬಗೆಹರಿಯದೆ ಕಂಗಾಲಾಗುವ ಅಪ್ಪಂದಿರು, ಇರುವ ಮೂರು ಮತ್ತೊಬ್ಬರಿಗೆ ಪದಾರ್ಥ ಯಾವುದು ಮಾಡುವುದೆಂಬ ಗೊಂದಲದ ಅಮ್ಮಂದಿರ ಮಧ್ಯೆ ಇದ್ದ ಸಾಯಂಕಾಲ ಅಡಗಿಹೋಗಿದೆ. ಮತ್ತೆಂದೂ ಸಿಗದಿರುವ ಹಾಗೆ…..

ಬೆಳಕು ಕಾಲಿಟ್ಟ ಮರುಕ್ಷಣವೇ ಮುಸ್ಸಂಜೆ ಮರೆಯಾಗಿದೆ. ಕತ್ತಲ ಬರುವಿಗೆ ಮುನ್ನದ ತಯಾರಿಗಳೆಲ್ಲ ಮನೆಯ ಹಾದಿ ಹಿಡಿದಾಯಿತು.

ಮನೆಯ ಅಜ್ಜಿಯಂದಿರು ಹೊರಬಾಗಿಲ ಹಾಕದೆ ಕಾಯುತ್ತಲೇ ಇದ್ದಾರೆ. ಎಷ್ಟೊತ್ತಿಗೆ ಬರುವಳೋ ಲಕ್ಷ್ಶ್ಮಿ. ಮುಸ್ಸಂಜೆಯ ಸುಳಿವೇ ಇಲ್ಲ!  ಬೆಳಕು ಕಂಡಕಂಡಲ್ಲಿ ತನ್ನ ಕೈ ಚಾಚಿ ನಗುತ್ತಿದೆ. ಕಣ್ಣು ಕೋರೈಸುವ ಜಗಮಗ ದೀಪಗಳ ಮಧ್ಯೆ ರಾತ್ರಿ ಕಳೆದುಹೋಗಿದ್ದೂ ತಿಳಿಯಲಿಲ್ಲ. ರಾತ್ರಿ ಕಾಲಿಡದೆ ನಿದ್ರಾದೇವಿಗೂ ಹತ್ತಿರ ಬರುವ ಮನಸ್ಸಿಲ್ಲ.

ನಾನು ಕಾಯುತ್ತಲೇ ಇದ್ದೇನೆ ನನ್ನ ಅಂಗಳದೆದುರು.. ಒಂದು ಸಡಗರದ ಸೂರ್ಯಾಸ್ತಕ್ಕಾಗಿ ಒಂದೇ ಒಂದು ಸುಂದರ ಮುಸ್ಸಂಜೆಗಾಗಿ……

ಹುಟ್ಟುತ್ತದೆಲ್ಲಿ ಕವಿತೆ?

ಹುಟ್ಟುತ್ತದೆಲ್ಲಿ ಕವಿತೆ?
ಹೊರಟಿದ್ದೇನೆ ಹುಡುಕುತ್ತ

ಹಿತ್ತಲ ಬೇಲಿಯಾಚೆಗೆ ದಾಟಿ
ಇಳಿಯುತ್ತಿರುವ ಸೂರ್ಯನ ಸರಿಸಿ
ಎಲೆಗಳ ಮೇಲಿನ ಇಬ್ಬನಿಗಳ ಸವರಿ
ಉಂಹೂ… ಕವಿತೆಯ ಸುಳಿವಿಲ್ಲ.

ಇಲ್ಲೇ ಇದ್ದೀತು ಸುತ್ತಮುತ್ತಲೆಲ್ಲೋ
ಗೆಳೆಯ ಕೊಟ್ಟ ಮೊದಲ ಮುತ್ತಿನಲ್ಲಿ
ಮೈಗಂಟಿ ಕೂತ ದುಪಟ್ಟಾದ ನೆರಿಗೆಗಳಲ್ಲಿ
ಕೂದಲ ಸಿಕ್ಕುಗಳಲ್ಲಿ
ಹೊರಳಾಟದ ರಾತ್ರಿಗಳಲ್ಲಿ
ಇಲ್ಲ….ಸಿಗಲಿಲ್ಲ ಕವಿತೆ

ಇದ್ದಿರಬಹುದೇ ಯುದ್ಧಗಳ ನಾಡಿನಲ್ಲಿ
ಸೋತು ಸುಣ್ಣವಾದವರ ನರನಾಡಿಗಳಲ್ಲಿ
ಅಥವಾ ಗೆದ್ದವರ ಅಟ್ಟಹಾಸದಲ್ಲಿ
ಇರಲಾರದು ಬಿಡಿ ಕವಿತೆ
ಸಮರಭೂಮಿಯಲ್ಲಿ
ಪ್ರೀತಿ ಇಲ್ಲದಲ್ಲಿ ಎಲ್ಲ ಶೂನ್ಯ
ಕವಿತೆಗೇನು ಕೆಲಸ ಅಲ್ಲಿ…

ಇನ್ನೆಲ್ಲಿ ಹುಡುಕಲಿ ನಾನು
ಕನಸು ಕಳೆದುಕೊಂಡವರಲ್ಲಿ
ಬದುಕು ಕಟ್ಟುವವರಲ್ಲಿ
ಕಡಲಂಚಿನ ನಿರಂತರ ಅಲೆಗಳಲ್ಲಿ ಅಥವಾ
ಅಲೆಗಳಿಗೆದುರಾಗಿ ಈಜಿ ಬಸವಳಿಯುತ್ತಿರುವವರಲ್ಲಿ?
ಛೆ!
ಅಷ್ಟು ಸುಲಭಕ್ಕೆ ಸಿಕ್ಕರದು ಕವಿತೆ ಹೇಗಾದೀತು….

ಆದರೆ,
ಚೌಕಟ್ಟುಗಳ ಮುರಿದು ಹೊರಬರುವ ಹೊತ್ತಲ್ಲಿ
ಎಡವಿದ ಘಳಿಗೆಗಳ ಗೆದ್ದು
ಜಗದೆದುರು ನಕ್ಕ ಕ್ಷಣದಲ್ಲಿ…
ನನ್ನೊಳಗ ಮೀರಿ ನಿನ್ನೊಳಗೊಂದಾಗಿ
ಇಟ್ಟ ಹೆಜ್ಜೆಗೆ ಜಗ ಕಂಪಿಸಿದ ದಿನಗಳಂದೂ
ಕೇಳಿದಂತಿತ್ತಲ್ಲ ಕವಿತೆ ಜೀವ ತಾಳಿದ ಸದ್ದು

ಹುಡುಕಬೇಕಿಲ್ಲ ಕವಿತೆಗಳ ಇನ್ನೆಲ್ಲೋ
ಹೊಸ್ತಿಲೀಚೆಗಿನ ಧ್ವನಿಗಳಿಗೆ ಕಿವಿಯಾದರೂ ಸಾಕು
ಕದಡಿದ ಕನಸುಗಳ, ಅದುಮಿಕೊಂಡ ರಾಗಗಳ
ಧ್ವನಿಯಾಗದ ಪಿಸುಮಾತುಗಳ
ಮದ್ಯದಲ್ಲೆಲ್ಲೋ ಸಿಗಬಹುದು ಕವಿತೆ

ತೆರೆಯಬೇಕಷ್ಟೇ ಮನದ ಕಣ್ಣುಗಳ
ಸರಿಸಿಕೊಂಡು ಮನದ ಪರದೆ
ಜೀವದಾಲಾಪಗಳೆಲ್ಲ ತುಂಬಿಕೊಂಡೀತು
ಎದೆಯೊಳಗೆ..

ನನಗೆ ಕವಿತೆ ಸಿಕ್ಕಿದ್ದು ಹಾಗೆಯೇ!

ಮೌನದಲ್ಲನಿಸಿದ್ದು…

Eyes
ದೀರ್ಘವಾಗುತ್ತವೆ ಹಗಲುಗಳು
ನಿರ್ಜೀವ ಕನಸುಗಳ ಚಪ್ಪರದಡಿ

ತಣ್ಣಗಿನ ಮೌನ, ಬೇಸರದ ಸಂಜೆಗಳು
ಯಾರೆಂದರು ನಿಮಗೆ
ಕೊಲ್ಲಲು ಆಯುಧಗಳೇ ಬೇಕೆಂದು ?

ಇಟ್ಟಲ್ಲಿಯೇ ಇರುವ ಪುಸ್ತಕ
ಮೇಜಿನ ಮೇಲೆ ಎರಡಿಂಚು ಧೂಳು
ಮಸುಕಾದ ಬಿಂಬದ ಬಗೆಗೀಗ
ಕನ್ನಡಿಯೂ ನಿರ್ಲಿಪ್ತ

ಕಿಟಕಿಯಾಚೆಗೆ ಇಣುಕುವ ಮೋಡಕ್ಕೆ
ಗುದ್ದಾಡಿಯಾದರೂ ಸದ್ದು
ಮಾಡುವ ಹಂಬಲ
ಗುಡಿಸುವಾಗ ಕೈಗೆ ಸಿಕ್ಕ ಚೂರು
ಹಗಲುಗನಸಿನದ್ದೆ?

ಮಾತನಾಡ ಬಯಸುತ್ತವೇನೋ
ಸುತ್ತಲಿನ ಗೋಡೆಗಳು
ನನ್ನೆದೆಯ ನಿಟ್ಟುಸಿರ ಸದ್ದು
ಹಳೆಯ ಸಂಗತಿ ಈಗ

ಮಡಚಿ ಎತ್ತಿಟ್ಟ ಪತ್ರದ
ಹಾಳೆಗಳೆಲ್ಲ ಹಳದಿಯಾಗಿವೆ
ಕಾಗದಗಳನ್ನೆಲ್ಲ ದಾಟಿ ಬಂದ ಗೆದ್ದಿಲು
ಹುಡುಕುತ್ತಿರುವುದು ನನ್ನೊಳಗನ್ನಲ್ಲ ತಾನೇ?

ಹೀಗಿಲ್ಲದೆಯೂ ಇರಬಹುದು
ಆಗಾಗ ಸರಿಸುತ್ತಿರಬೇಕು ಮನದ ಪರದೆ
ಬಿರುಬಿಸಿಲಲ್ಲೂ ಒಮ್ಮೊಮ್ಮೆ ಕಣ್ಣು ಕತ್ತಲಾಗುವುದಿದೆ……!

ಮರಳಿ ನೆನಪುಗಳೆಡೆಗೆ….

IMG_5134

ಕೋಯೀ ಮೌಸಮ್ ಐಸಾ ಆಯೇ
ಉನಕೋ ಅಪನೇ ಸಾಥ್ ಜೋ ಲಾಯೇ…

ಅದೆಷ್ಟೋ ದಿನಗಳೇ ಕಳೆದುಹೊದವಲ್ಲ ನನ್ನ ಬಾಲ್ಕನಿಯಲ್ಲಿ ರಾಗಗಳು ಕೇಳದೇ.. ಒಂದು ಹಿತವಾದ ಮುಸ್ಸಂಜೆ, ಅದಕ್ಕೂ ಚೆನ್ನಾದ ಕೆನೆ ಕಾಫಿ, ತೀರದ ಕನಸುಗಳೊಂದಿಗೆ ಕಳೆದುಹೊಗಲೂ ಮನಸು ಹದಗೊಳ್ಳಬೇಕು. ಏನನ್ನೋ ಓದುತ್ತ ಯಾರ್ಯಾರದೋ ಕನಸುಗಳನ್ನು ,ಯೋಚನೆಗಳನ್ನು ನಮ್ಮ ಕಣ್ಣೊಳಗೆ ತುಂಬಿಕೊಳ್ಳುತ್ತಾ ಮರೆಯಾಗುವುದಕ್ಕಿಂತ ಬಾಲ್ಕನಿಯೊಳಗೆ ನಾನು ನಾನಾಗುವುದೇ ವಾಸಿ ಅಲ್ಲವೇ?

ಉಸ್ ಮೋಡ್ ಸೆ ಶುರೂ ಕರೇ ಫಿರ್ ಯೇ ಜಿಂದಗಿ…..
ಹರ್ ಶೆಜಹಾ ಹಸೀನ್ ಥೀ ಹಮ್ ತುಮ್ ಥೇ ಅಜನಬೀ…

ಹೀಗೆಲ್ಲ ಯೋಚಿಸುವುದು ತಪ್ಪಾದೀತು. ಕಳೆದು ಹೋದ ಕಾಲಕ್ಕೆ ತಿರುಗಿ ಹೋಗಿಬಿಟ್ಟರೆ ನನ್ನ ನನಸಾದ ಕನಸುಗಳ ಕಥೆ ಏನಾಗಬೇಡ? ದಿನಗಳಿದ್ದವು……. ಜಡಿಮಳೆಗೆ ಕೈಯೊಡ್ಡಿ ಕನಸು ಕಾಣುತ್ತ ಅಲ್ಲೇ ನಿಂತು ಬಿಡುವ ಕ್ಷಣಗಳು. ಓದುತ್ತ ಓದುತ್ತ ಇತಿಹಾಸ, ಗಣಿತ..ವಿಜ್ನಾನಗಳೆಲ್ಲ ಕಲಸು ಮೇಲೋಗರವಾಗಿ ಕುಳಿತಲ್ಲೇ ನಿದ್ದೆ ಹೋಗುವ.. ನಡೆದಷ್ಟೂ ದೂರವಾಗುವ ರಸ್ತೆಯಲ್ಲಿ ಅಪರೂಪಕ್ಕೆ ಇಷ್ಟವಾಗುವ ಏಕಾಂಗಿತನದ… ಕಾಣದ ಗೆಳೆಯನ ಕಲ್ಪನೆಯ ಸುಖದ ಅದೆಷ್ಟೋ ಘಳಿಗೆಗಳು..

ಬೀತೇ ಲಮ್ಹೆ ಕುಚ್ ಐಸೆ ಹೈ
ಖುಷ್ಬೂ ಜೈಸೆ ಹಾತ್ ನ ಆಯೇ….
ಹಾಲ್ ಜೋ ದಿಲ್ ಕಾ ಜುಗನೂ ಜೈಸಾ
ಜಲತಾ ಜಾಯೆ.. ಭುಜತಾ ಜಾಯೆ….

ನೆನಪುಗಳ ಜೋಳಿಗೆಗೆ ಕೈ ಹಾಕಿದರೆ ಲೆಕ್ಕವಿಲ್ಲದಷ್ಟು ಬಿಂಬಗಳು. ನೋಡ ನೋಡುತ್ತಲೇ ಬಾಲ್ಕನಿಯಲ್ಲಿ ಕತ್ತಲಾವರಿಸುತ್ತದೆ. ಎಳನೀರು ಗಾಡಿಯವನು ಸವೆದು ಬಣ್ಣ ಕಳೆದುಕೊಂಡ ನಸುನೀಲಿ ತಾಡಪಾಲು ಗಾಡಿಗೆ ಮುಚ್ಚಿ ಮನೆಗೆ ಹೊರಡಲು ರೆಡಿಯಾಗುತ್ತಾನೆ.. ಪುಟ್ಟ ಪಾಪುವಿಗೆ ಅಮ್ಮ ಉಣಿಸುವ ಹಾಲು ಅನ್ನ ಬೇಸರವಾಗಿದೆ. ಆಗಸದ ಚಂದ್ರನೂ ಹಳತಾಗಿದ್ದಾನೆ. ಮೀನು ಮಾರುವವವನ ಅಂಗಡಿಯೆದುರು ಇಳಿಸಿಹೋದ ದೊಡ್ಡ ದೊಡ್ಡ ಮಂಜುಗಡ್ಡೆಗಳು ಕರಗಲು ಶುರುವಾಗಿವೆ… ಕತ್ತಲೆಂದರೆ ಯಾರಿಗೋ ಮುಗಿದ ದಿನ. ಮತ್ತಾರದೋ ಕನಸು ಕಾಣುವ ಕಣ್ಣುಗಳಿಗೆ ಮುಗಿಯದ ಇರುಳು….

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ…. ನೀನಿಲ್ಲದೆ……

ಗಝಲ್ ಗಳೂ ಬೇಸರವಾದಾಗ ಸೋನು ನಿಗಮ್ ಮನ ತುಂಬುತ್ತಾನೆ… ಅದು ಯಾವತ್ತಿಗೂ ಬೇಸರವಾಗದ ಭಾವ! 🙂
ಬೇಸರಕ್ಕೂ ಸೈ.. ಕನವರಿಕೆಗಳಿಗೂ ಸರಿ , ಪ್ರೀತಿಗೂ ಸರಿ.. ಕಡಲ ತೀರದ ಅಲೆಗಳಿಗೆ ಕಾಲು ಚಾಚಿ ಕುಳಿತ ಹೊತ್ತಿನಿಂದ ಹಿಡಿದು ಬೇಸರದ ಸಂಜೆಗಳಲ್ಲಿ ಮೌನಕ್ಕೆ ಶರಣಾದ ಕ್ಷಣಗಳವರೆಗೆ…

ಧುನಿಯಾ ಕಿ ರಸ್ಮೋ ಕೋ ಚಾಹತ್ ಮೇ ಶಾಮಿಲ್ ನ ಕರನಾ..
ಮಂಜಿಲ್ ಹಮ್ ಅಪನೀ ಪಾ ಕೆ ರಹೇಂಗೇ ನಾ ತುಮ್ ಕಿಸೀಸೇ ನ ಢರನಾ

ಪಾಗಲ್ ರಸ್ಮೆ ಪಾಗಲ್ ಧುನಿಯಾ
ಔರ ಥೋಡೇ ಹಮ್ ತುಮ್ ಪಾಗಲ್ ….

ನಾನು, ನನ್ನ ಬಾಲ್ಕನಿ ಇಬ್ಬರು ಮತ್ತೆ ನೆನಪುಗಳಿಗೆ ಮರಳುತ್ತಿದ್ದೇವೆ… ಹೊಸ ಹೊಸ ಕನಸುಗಳೊಂದಿಗೆ…..

ಕತ್ತಲಾಗುವ ಹೊತ್ತು….

ಕತ್ತಲಾಗುವ ಹೊತ್ತು
ನೆರಳುಗಳಿಗೆಲ್ಲ ಅಸ್ತಿತ್ವ ಕಳೆದುಕೊಳ್ಳುವ ಭಯ

ಬೆಳಗಿಡೀ ಸುರಿದ ಮಳೆಯ ಕಟ್ಟಕಡೆಯ ಹನಿ
ಒಳಮನೆಯಲ್ಲಿ ಉಕ್ಕುತ್ತಿರುವ ಹಾಲು
ಬಂಧಿಯಾಗಿದ್ದ ಪೆನ್ನು ಪುಸ್ತಕಗಳಿಗೆಲ್ಲ
ಪಾಟೀಚೀಲದಿಂದ ಮುಕ್ತಿ

ಅಂಗಿಯ ಮೇಲೆಲ್ಲಾ ಶಾಯಿಯ ಗುರುತು
ಅಳಿಸಿದಷ್ಟೂ ಉಳಿಯುವ ಕಲೆ
ಮಡಚಿ ಒಳಗಿಟ್ಟ ಕೊಡೆಯಲ್ಲಿ
ಒದ್ದೆ ಒದ್ದೆ ನೆನಪುಗಳು….

ಹೊಸ್ತಿಲಾಚೆಗಿಂದ ಕೇಳುವ ಬಿಕ್ಕು
ದೇವರ ನಾಮದಲ್ಲೀಗ ಭಕ್ತಿ ಲಯ
ಮಾಡಿಗಂಟಿ ಕುಳಿತ ಗುಬ್ಬಚ್ಚಿಯದು
ಕಾತರದ ನೋಟ

ಕತ್ತಲಾಗುವ ಹೊತ್ತು
ದಾರಿಗಳದ್ದೇನೋ ಗೊಣಗಾಟ
ಚೆಲ್ಲಿದ ಮೈ ತಂಪಾಗಿ ಅನಾಥಭಾವ ..
ಕಡುಗತ್ತಲಾದ ಮೇಲೆ ಜಗವೆಲ್ಲ ಹಳದಿ

ದಾರಿ ಕೂಡುವಲ್ಲಿ..

ಇದು ನನ್ನದಲ್ಲದ ಕವಿತೆ. ಬಾಲ್ಕನಿ ಗೆ ಬಂದು ಕುಳಿತಿತ್ತು. ನಂಗೆ ಖುಷಿಯಾಗಿದ್ದರಿಂದ ನಿಮ್ಮೊಂದಿಗೂ ಹಂಚಿಕೊಳ್ಳೋಣ ಅಂತ. ಯಾರದ್ದು ಅಂತ ಕೇಳಬೇಡಿ. ನಿಮಗೆ ಗೊತ್ತಿದ್ದಷ್ಟೇ ನನಗೂ.
….. just enjoy!

ದಾರಿ ಕೂಡುವಲ್ಲಿ..

ಬೆಳಕು ಮೂಡುವ ಘಳಿಗೆ
ಕಣ್ಣ ಬಿಚ್ಚಿದರೆ
ರೆಪ್ಪೆಗಳಗಿಂದ ಹಾರಿದ ಕನಸು
ಬೆಳಕಿನ ಬಣ್ಣಗಳಲ್ಲಿ ಲೀನ

ಇಲ್ಲ, ಬೆಳಗಿಗೆ ಬಣ್ಣ ತುಂಬಿ
ಬಿಸಿಲ ತೋರಿದ್ದೂ ಅದೇ ಇರಬಹುದು

ದಿನದುದ್ದಕೂ ಕನಸ ಹುಡುಕುತ್ತ
ಹೊರಟ ಹಾದಿಯಲ್ಲಿ
ಸಿಕ್ಕ ವಾಸ್ತವವನ್ನೆಲ್ಲ ಹೆಕ್ಕುತ್ತ
ದೂರ ನೋಡಿದರೆ
ಬಿಸಿಲಿಗಾಗಲೇ ಸುಸ್ತು ಹೊಡೆದು
ಮತ್ತದೇ ಬಣ್ಣಗಳ ಆಟ

ಸೂರ್ಯ ಮುಳುಗುವ ಹೊತ್ತು
ತಂಪಾಗಿ ನಡೆದುಬಿಡುತ್ತೇನೆ
ಹೆಜ್ಜೆಗಳ ಬಿರುಸೆಲ್ಲ ನಿಧಾನ
ನಿಧಾನವಾಗಿ ಇಳಿವಲ್ಲಿ
ಕುಳಿತು ಸಾಯಂಕಾಲ ಸವಿಯುತ್ತೇನೆ

ಗಾಳಿ ತನ್ನಿರುವ ಸ್ಪಷ್ಟಪಡಿಸುವಾಗ
ಕುಳಿತಲ್ಲೆ ಕದಲಿ ಖುಷಿಯಾಗಿ
ಸುಳಿಯಾಗುವ ಮುಂಗುರುಳ ತೀಡಿ
ಹಗುರಾಗಿ ಹೊರಡುತ್ತೇನೆ
ಬೆಳಕು ದಾರಿ ಕೂಡುವಲ್ಲಿ

ನಾನವಳಲ್ಲ….

ಒಂದು ಕಡೆ ಬ್ಲಾಗಿನ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಇನ್ನೆಲ್ಲೋ ಕೆಸರೆರೆಚಾಟ ಮುಂದುವರೆದೇ ಇದೆ. ಮತ್ತೆಲ್ಲೋ ಬ್ಲಾಗಿಗರು ಬಾಗಿಲು ಮುಚ್ಚುತ್ತಿದ್ದಾರೆ. ನಾನು ನನ್ನ ಪಾಡಿಗೆ ಬಾಲ್ಕನಿಯಲ್ಲಿ ಕುಳಿತು ಕೆನೆ ಕಾಫಿ ಹೀರೋಣ ಅಂದ್ರೆ ನೀನ್ಯಾಕೆ ದೂರ ಅಂತ ನಂಗೂ ಒಂದು ತಲೆಬಿಸಿ ಸುತ್ತಿಕೊಂಡಿದೆ. ನಾನು ನಾನೇನಾ? ಅಥವಾ ನಾನು ಅವಳಾ? ಇಲ್ಲಾ, ಅವಳೇ ನಾನಾ? ಫುಲ್ ತಲೆಬಿಸಿ. ನಂಗೂ ಹೇಳಿ ಹೇಳಿ ಸಾಕಾಯ್ತು.

ಈಗ ವಿಷ್ಯ ಏನಪ್ಪಾ ಅಂದ್ರೆ, ಕೆಂಡಸಂಪಿಗೆ ವೆಬ್ ಸೈಟ್ ಗೆ ಹೋದರೆ ನಿಮಗೆ ವೈಶಾಲಿ ಹೆಗಡೆ ಅನ್ನುವವರ ಬರಹಗಳು ಸಿಗುತ್ತೆ. ಕೆಂಡಸಂಪಿಗೆಯ ಬರಹಗಾರರ ಬಳಗದಲ್ಲಿ ಅವರೂ ಒಬ್ಬರು. ಚಂದದ ಕವಿತೆಗಳನ್ನೂ ಬರೀತಾರೆ.

ಈಗ ಕನ್ಫ್ಯೂಷನ್ನು ಏನಂದ್ರೆ ನಾನವಳಲ್ಲ! ತುಂಬಾ ಜನ ನಂಗೆ ಕೇಳಿದ್ರು. ಕೆಂಡಸಂಪಿಗೆಗೆ ಬರೆಯೋ ವೈಶಾಲಿ ಹೆಗಡೆ ನೀವೇನಾ ಅಂತ. ನಮ್ಮಿಬ್ಬರ ಹೆಸರು, ನಾವಿಬ್ಬರೂ ಹೊರದೇಶದಲ್ಲಿರುವವರೂ ಆಗಿದ್ದರಿಂದ ಈ ಗೊಂದಲ ಆಗಿರಬಹುದು. ಬಹುಶಃ ನನ್ನ ಈ ಅನುಭವ ಅವರಿಗೂ ಆಗಿರಲಿಕ್ಕೆ ಸಾಕು. ಹಾಗಾಗಿ ದಯವಿಟ್ಟು ಕನ್ಫ್ಯೂಸು ಆಗ್ಬೇಡಿ 🙂 ನಾನವಳಲ್ಲ…. ಏನೋ..ಚಿಕ್ಕದೊಂದು ಬ್ಲಾಗು ಅಂತ ಮಾಡ್ಕೊಂಡು ಬಾಲ್ಕನಿಲಿ ಕಾಫಿ ಕುಡ್ಕೊಂಡು, ಹಾಡು ಕೇಳ್ಕೊಂಡು ಹಾಯಾಗಿದ್ದೆ. ಇದೇನೋ ಹೊಸ ಗೊಂದಲ ಮೈಮೇಲೆ ಬಿತ್ತು. ಈಗ ಸ್ವಲ್ಪ ಓಕೆ… ಇದನ್ನ ಹೇಳಿದ್ಮೇಲೆ ತಲೆಬಿಸಿ ಕಡಿಮೆಯಾಗುತ್ತೆ ಅಂದ್ಕೊಂಡಿದೀನಿ.

ಕಾಫಿ ಆರೋಯ್ತು  😦  😦

– ವೈಶಾಲಿ

ಕಾಯುವುದೆಂದರೆ…..

ಕಾಯುವುದೆಂದರೆ ಕರಗುತ್ತಿರುವಂತೆ
ನನಗನ್ನಿಸಲಿಲ್ಲ ಹಾಗೆ

ಕರಗುವುದಾದರೆ ಮೊದಲು ಮೆದುವಾಗಬೇಕು
ನಂತರ ಹನಿ
ಹನಿಯಾಗಿ ಕೆಳಗಿಳಿಯಬೇಕು
ಮೆಲ್ಲನೆ ಹರಿದು ಹಗುರಾಗಬೇಕು
ಅದೆಲ್ಲ ಆಗು ಹೋಗುವ ಮಾತೆ?

ಕಾಯುವಾಗೆಲ್ಲ ಕಿಡಿಯಾಗುತ್ತೇನೆ ನಾನು
ಅದು ಜಡ್ಡುಗಟ್ಟುವ ಕ್ರಿಯೆ
ಕುಳಿತಲ್ಲೇ ನಿದ್ದೆ ಹೋಗಿದ್ದೇನೆ ಕೂಡ

ಕಾದಂತೆಲ್ಲ ಕಳಿಯುತ್ತದೆ ಮನ
ನನಗನ್ನಿಸಲಿಲ್ಲ ಹಾಗೆ
ಮನದೊಂದಿಗೆ ತಲೆಯನ್ನೂ ಕಾಯಿಸಿಕೊಂಡಿದ್ದಿದೆ
ಕಣ್ಣ ರೆಪ್ಪೆಗಳಿಗೀಗ ಭಾರಕ್ಕೆ ಶಕ್ತವಲ್ಲ

ಕಾಯುವಿಕೆಯೆಂದರೆ ಕಡಲಾಗುವಿಕೆ
ಎಷ್ಟು ಈಜಿದರೂ ಬಾರದ ತೀರ
ಬಗೆಹರಿಯದ ನೀರವತೆ
ಒಳಹೊರಗೆಲ್ಲ ಮೌನ,
ಮಾತು ಕೊಂದ ನಂತರದ ಖುಷಿ

ಕಾಯುವುದೆಂದರೆ ಕೆನೆಗಟ್ಟಿದಂತೆ
ಪದರು ಪದರಾದ ಸಿಟ್ಟು ಅಸಹನೆ
ಕೈ ತಪ್ಪಿದ ತಾಳ್ಮೆ
ಕಾಯುವುದೆಂದರೆ ಕೆಟ್ಟು ಹೋದ ಗಡಿಯಾರ…..