ಕವಿತೆಯೆಂದರೆ ಹೀಗೇ…..

ಕಣ್ಣ ಕನಸುಗಳೆಲ್ಲ ಕವಿತೆಯಾಗುವುದಿಲ್ಲ
ಮನಸು ಹಸಿಯಾಗಬೇಕು ನೆನಪಿನೊಳಗೆ

ಕಂಡಿದ್ದು ಹೇಳುವಂತಿಲ್ಲ ಕಂಡಹಾಗೆ
ಶಬ್ದಗಳ ಜಾಡು ಹಿಡಿದು ಅರಸಬೇಕು

ಹೇಳಲಾರದ ಪ್ರೀತಿಯಂತಲ್ಲ ಕವಿತೆ
ಹೇಳಿಯೂ ಇನ್ನೇನೋ ಉಳಿಸಿಕೊಂಡಿರಬೇಕು

ಕವಿತೆ ನದಿಯಂತೆ ಅಂದಿದ್ದು ಯಾರೋ
ನದಿಯಾಗುವ ಮೊದಲು ತೊಟ್ಟಿಕ್ಕಬೇಕು

ಎಡತಾಕಬೇಕು ನೆನಪುಗಳ ಗುಂಪಿನೆಡೆಗೆ
ಕದಿಯಬೇಕು ಕನಸೊಂದನ್ನು ಸದ್ದಿಲ್ಲದ ಹಾಗೆ

ಗೆಳೆಯ ಕೊಟ್ಟ ಮೊದಲ ಮುತ್ತಂತದ್ದು ಕವಿತೆ
ಎದೆಯಾಳಕ್ಕೆ ಹೋಗಿ ಕಣ್ಣಿನಲ್ಲರಳಬೇಕು

ಕಾಡಿದ್ದೆಲ್ಲ ಕವನವಾಗಬೇಕು ಎಂದೇನಿಲ್ಲ
ಕಾಡದಿರುವುದು ಕೂಡ ಪದ್ಯವಾದೀತು

ಕವಿತೆಯೆಂದರೆ ಹೀಗೇ
ಮನದ ನೆರಳಿನ ಹಾಗೆ…..
ಕಾಯಬೇಕು….ಕಾಡಬೇಕು…
ಬರಿಗಾಲ ಹೆಜ್ಜೆ ಮೂಡಿಸಬೇಕು……….

4 thoughts on “ಕವಿತೆಯೆಂದರೆ ಹೀಗೇ…..

  1. ಬಾಲ ಹೇಳುತ್ತಾರೆ:

    ವೈಶಾಲಿಯವರೇ,
    ಕವಿತೆಯ ವರ್ಣನೆ ಚೆನ್ನಾಗಿದೆ.
    “ಎದೆಯಾಳಕ್ಕೆ ಹೋಗಿ ಕಣ್ಣಿನಲ್ಲರಳಬೇಕು” ಎಂಬ ಸಾಲು ತುಂಬಾ ಹಿಡಿಸಿತು

  2. ಖುಷಿ ಹೇಳುತ್ತಾರೆ:

    “ಕವಿತೆಯೆಂದರೆ ಹೀಗೇ
    ಮನದ ನೆರಳಿನ ಹಾಗೆ…..
    ಕಾಯಬೇಕು….ಕಾಡಬೇಕು…
    ಬರಿಗಾಲ ಹೆಜ್ಜೆ ಮೂಡಿಸಬೇಕು…”

    ಈ ಸಾಲುಗಳು ಮನತಟ್ಟುವಂತಿದೆ! ಬಹಳ ಚೆನ್ನಾಗಿ ಬರಿತೀರಾ…
    ಥ್ಯಾಂಕ್ಸ್ 🙂

  3. ranjith ಹೇಳುತ್ತಾರೆ:

    ಎಲ್ಲಾ ಪ್ಯಾರಗಳೂ ಸೂಪರ್…
    ನನಗನ್ನಿಸಿದ ಮಟ್ಟಿಗೆ ನೀವು ಬರೆದಿದ್ದರಲ್ಲೇ ಬೆಸ್ಟ್ ಇದು!

    ಗೆಳೆಯ ಕೊಟ್ಟ ಮೊದಲ ಮುತ್ತಿನಂತೆ ಎದೆಯಾಳಕ್ಕೆ ಹೋಗಿ ಕಣ್ಣಿನಲ್ಲರಳಬೇಕು….
    ನೆನಪಿನ ಗುಂಪಿಗೆ ಹೋಗಿ ಸದ್ದಿಲ್ಲದೆ ಕನಸನ್ನು ಕದಿಯುವುದು… ಮನದ ನೆರಳಿನ ಹಾಗೆ ಕಾಯಬೇಕು.. ಕಾಡಬೇಕು…

    ಇಷ್ಟಾಗದೇ ಹೋದರೆ ಕವಿತೆ ಅರಳುವುದು ಹೇಗೆ?
    ಒಳ್ಳೆಯ ಕವನ ಓದಿ ತುಂಬಾ ದಿನವಾಗಿತ್ತು….
    ಥ್ಯಾಂಕ್ಸ್!

  4. ವೈಶಾಲಿ ಹೇಳುತ್ತಾರೆ:

    ಬಾಲ ಅವರಿಗೆ,
    ಸ್ವಾಗತ ನನ್ನ ಬಾಲ್ಕನಿಗೆ..
    ನನ್ನ ಸಾಲುಗಳು ನಿಮಗೆಲ್ಲ ಇಷ್ಟವಾದರೆ ನನಗೂ ತುಂಬ ಖುಷಿ. ಬರ್ತಾ ಇರಿ.
    ಪ್ರೀತಿಯಿರಲಿ.

    ಖುಷಿ ಗೆ,
    ನನ್ನ ಭಾವಗಳೆಲ್ಲ ನಿಮ್ಮ ಮನತಟ್ಟಿತು ಅಂತಾದರೆ ಅದಕ್ಕಿಂತ ಹೆಚ್ಚು ಖುಷಿ ಯಾವುದಿದೆ? 🙂
    ಧನ್ಯವಾದಗಳು.

    ರಂಜಿತ್,
    ಹಾಗಂತೀರಾ??
    ಏನೋ..ಚೂರು ಪಾರು ಬರೀತೀನಿ. ನಿಮಗೆಲ್ಲ ಇಷ್ಟ ಆಯ್ತು ಅಂದ್ರೆ ನನ್ನ ಅಕ್ಷರಗಳು ಧನ್ಯ!
    ಈ ಪ್ರೀತಿ, ಪ್ರೋತ್ಸಾಹ ಸದಾ ಇರಲಿ. ನೀಲಿಹೂವಿನಿಂದಾಗಿ ನನ್ನ ಬಾಲ್ಕನಿ ಯಲ್ಲೂ ಚಂದದ ಪರಿಮಳ! 🙂

Leave a reply to ಬಾಲ ಪ್ರತ್ಯುತ್ತರವನ್ನು ರದ್ದುಮಾಡಿ