ಮಲಗು ಮಲಗೆನ್ನ ಮರಿಯೇ
ಬಣ್ಣದ ನವಿಲಿನ ಗರಿಯೇ…….
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಧರೆಗೆ…….
ಹಾಡು ಕೇಳುತ್ತಲೇ ಇದೆ ಮೆಲ್ಲಗೆ …..ಮಗು ನಿದ್ದೆ ಹೋಗಿದೆ… ರಾತ್ರಿಯೂ ನಿದ್ದೆಗಣ್ಣಲ್ಲಿದೆ…..
ಕತ್ತಲೆಂದರೆ ಕತ್ತಲೇ.. ಅದು ನಿಯಾನ್ ದೀಪಗಳ ಹಿಂದಿನ ನಸು ಹಳದಿ ಕತ್ತಲಲ್ಲ. ಪಟ್ಟಣದ ರಸ್ತೆ ತುದಿಯ ಬಾರಿನ ಮಬ್ಬುಗತ್ತಲಲ್ಲ. ಹೊಸ್ತಿಲೀಚೆಗಿನ ಮಧ್ಯ ಒಳದಲ್ಲಿ ನೆಪಮಾತ್ರಕ್ಕೆ ಉರಿಯುವ ದೇವರ ದೀಪದ ನಿರಾಳ ಕತ್ತಲೂ ಅಲ್ಲವೇ ಅಲ್ಲ. ಚಿಲಕ ಸರಿಸಿ, ಬಾಗಿಲ ಇಷ್ಟೇ ಇಷ್ಟು ಅಡ್ದಾಗಿಸಿ ಮರೆಯಾಗಿಸುವ ನೆರಳಿನಂತಹ ಕಪ್ಪೂ ಅಲ್ಲ. ಅದು ಹೆಸರು ಕೇಳಿದರೇ ಬೆಚ್ಚಿ ಬೀಳಿಸುವ ಕತ್ತಲು. ರಾತ್ರಿಯೆದ್ದು ಬಚ್ಚಲ ಮನೆಯ ದೀಪ ಹಾಕುವ ಮುನ್ನ ಗಬಕ್ಕನೆ ಹಿಡಿದುಬಿಟ್ಟೇನೆನ್ನುವ ಕಡುಗಪ್ಪು.
ರಾತ್ರಿಯಿಡೀ ಒದರಾಡುವ ಮಳೆ ಜಿರಳೆಗಳೂ ಭಯ ಹುಟ್ಟಿಸಿಕೊಂಡು ಸುಮ್ಮನಾಗುವಂಥ ಕರಾಳ ಕತ್ತಲು. ಅತ್ತರೆ ಹಿಡಿದು ಕತ್ತಲೆ ಕೋಣೆಗೆ ಬಿಡುವೆನೆಂದಾಗ ಅವಿತುಕೊಳ್ಳುವ ಮಗುವಿನ ಕಣ್ಣಿನಲ್ಲಿ ಕಾಣುವ ಭಯದ ಕಾರ್ಗತ್ತಲು…. ಬೆಳಕಿನ ಮನೆಯಿಂದ ಸೂರ್ಯ ಈಚೆ ಕಾಲಿಡುವ ತಾಸಿಗೂ ಮೊದಲು ಇಬ್ಬನಿಯ ತಂಪೂ ಸೇರಿ ತಣ್ಣಗಾಗಿರುವ ರಾತ್ರಿ. ಊರ ದಾರಿಗಳೆಲ್ಲ ಇನ್ನೆಂದೂ ಏಳದಂತೆ ಮಲಗಿ ತಟಸ್ಥಗೊಳ್ಳುವ ಹಾಗೆ. ಅಥವಾ ಹಾಗೆಂದುಕೊಳ್ಳಲೂ ಬೆಳಕು ಸ್ವಲ್ಪವಾದರೂ ಬೇಕೇ ಬೇಕು. ಇಲ್ಲಿ ದಾರಿಗಳೇ ಕತ್ತಲಲ್ಲಿ ಕರಗಿ ಹೋದಂತೆ.
ಹಾಸಿಗೆಯಿಂದೆದ್ದು ಕುಳಿತರೆ ಅಸ್ತಿತ್ವ ನನಗೊಬ್ಬಳಿಗೆ ಮಾತ್ರ ಎನ್ನಿಸುವಂತೆ. ಇನ್ನೆಂದಿಗೂ ನಸುಕು ಹರಿಯುವುದೇ ಇಲ್ಲವೇನೋ ಎಂಬ ಹಾಗೆ. ಎಲ್ಲೋ ಪಿಸುಗುಡುವ ಸದ್ದು.. ಇನ್ನೆಲ್ಲೋ ನರಳಾಟ. ಕತ್ತಲ ರಾಜ್ಯಕ್ಕೆ ಕಾಲಿಟ್ಟವನೇ ದೊರೆ.
ನಿದ್ದೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು……
ಕತ್ತಲೆಂದರೆ ನಿರಾಳತೆ. ಸದ್ದೆಲ್ಲ ಅಡಗಿ, ಮೌನ ಮೊದಲಾಗಿ ಮನಸು ಖಾಲಿ ಖಾಲಿ. ಹಾಗೆಯೇ ಮುಂದುವರೆದರೆ ನೆನಪುಗಳ ಸರಣಿ. ಕತ್ತಲೆಂದರೆ ಏನೆಲ್ಲ. ಹಾಗೂ ಕತ್ತಲೆಂದರೆ ಎಲ್ಲವೂ ಅಲ್ಲ!
ಹೀಗೆ ನೆನಪುಗಳ ಪರದೆ ಬಗೆದು ಹೊರಗೆ ಕಾಲಿಟ್ಟಿದ್ದೇ ಇಟ್ಟಿದ್ದು. ಮತ್ತಿನ್ನೆಂದೂ ಮುಖ ತೋರದಂತೆ ಕತ್ತಲು ಮೂಲೆ ಸೇರಿದೆ. ಈಗೇನಿದ್ದರೂ ಬೆಳಕಿನ ಸಾಮ್ರಾಜ್ಯ. ಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದ ಹಾಗೆ ಕಣ್ಣು ಕೋರೈಸುವ ದೀಪಗಳು. ಕತ್ತಲಿಗೇ ತನ್ನ ಅಸ್ತಿತ್ವದ ಸಂಶಯ ಹುಟ್ಟಿಸುವ ಹಾಗೆ.
ಸಂಜೆಯ ಸುಳಿವು ಸಿಗುತ್ತಿದ್ದಂತೆಯೇ ಒಂದೊಂದಾಗಿ ಬೆಳಕಿನ ಮೆರೆವಣಿಗೆ. ಮೆಲ್ಲಗೆ ಹೆಜ್ಜೆಯಿಟ್ಟು ದಾರಿಗಳ ಆಚೀಚೆ, ಮನೆಗಳ ಮೂಲೆ ಮೂಲೆ …. ಕಪ್ಪು ಕಡಲಾಚೆಯ ಆಳವನ್ನೂ ಬಿಡದೆ ಮೆಲ್ಲಗೆ ಆವರಿಸುತ್ತದೆ. ಕಣ್ಣುಗಳ ಒಳ, ಹೊರ ಹೊಕ್ಕು ಮೋಸಗೈಯ್ಯುತ್ತಿದೆ.
ಇಲ್ಲಿ ಎಲ್ಲವೂ ಬಟಾಬಯಲು. ಕತ್ತಲ ಅರಮನೆಯ ಪ್ರತಿ ಹೆಜ್ಜೆಯೂ ದಾಖಲು. ಏನನ್ನೂ ಮುಚ್ಚಿಡುವ ಸುಖವಿಲ್ಲ. ಇಂಚಿಂಚೂ ಬಿಡದೆ ಬಯಲಾಗಿ, ಬೆತ್ತಲಾಗಿ ಬರಿದಾಗಿಸಿಬಿಡುವ ಬೆಳಕು!
ಕೈಕಾಲು ತೊಳೆದು ದೀಪ ಹಚ್ಚಿ, ಕಾಣದ ದೇವರ ನೆನೆಯುವ, ಹಸಿರು ಹಾಸಿನಿಂದ ಹೊಡಚಲಿನೆಡೆಗೆ ನಡೆಯುವ, ಹೊಲಿಗೆ ಬಿಟ್ಟ ಪಾಟೀಚೀಲ ಅಮ್ಮನಿಗೆ ತೋರಿಸುವ ಸುಂದರ ಮುಸ್ಸಂಜೆ ಇಲ್ಲೇ ಎಲ್ಲೋ ಕಳೆದು ಹೋಗಿದೆ!
ಅವತ್ತಿನ ಕೊನೆಯ ಸಿಗರೇಟಿನ ಹೊಗೆಯನ್ನು ಸ್ವಲ್ಪ ಹೆಚ್ಚೇ ಒಳಗೆಳೆದುಕೊಂಡು ಮನೆಗೆ ನಡೆವ ಮೀಸೆಯಿನ್ನೂ ಮೂಡದ ಪೋರ, ದಿನದ ಲೆಕ್ಕದ ಪಟ್ಟಿ ತೆರೆದು ಹೆಚ್ಚುತ್ತಲೇ ಹೋಗುವ ಖರ್ಚು ಬಗೆಹರಿಯದೆ ಕಂಗಾಲಾಗುವ ಅಪ್ಪಂದಿರು, ಇರುವ ಮೂರು ಮತ್ತೊಬ್ಬರಿಗೆ ಪದಾರ್ಥ ಯಾವುದು ಮಾಡುವುದೆಂಬ ಗೊಂದಲದ ಅಮ್ಮಂದಿರ ಮಧ್ಯೆ ಇದ್ದ ಸಾಯಂಕಾಲ ಅಡಗಿಹೋಗಿದೆ. ಮತ್ತೆಂದೂ ಸಿಗದಿರುವ ಹಾಗೆ…..
ಬೆಳಕು ಕಾಲಿಟ್ಟ ಮರುಕ್ಷಣವೇ ಮುಸ್ಸಂಜೆ ಮರೆಯಾಗಿದೆ. ಕತ್ತಲ ಬರುವಿಗೆ ಮುನ್ನದ ತಯಾರಿಗಳೆಲ್ಲ ಮನೆಯ ಹಾದಿ ಹಿಡಿದಾಯಿತು.
ಮನೆಯ ಅಜ್ಜಿಯಂದಿರು ಹೊರಬಾಗಿಲ ಹಾಕದೆ ಕಾಯುತ್ತಲೇ ಇದ್ದಾರೆ. ಎಷ್ಟೊತ್ತಿಗೆ ಬರುವಳೋ ಲಕ್ಷ್ಶ್ಮಿ. ಮುಸ್ಸಂಜೆಯ ಸುಳಿವೇ ಇಲ್ಲ! ಬೆಳಕು ಕಂಡಕಂಡಲ್ಲಿ ತನ್ನ ಕೈ ಚಾಚಿ ನಗುತ್ತಿದೆ. ಕಣ್ಣು ಕೋರೈಸುವ ಜಗಮಗ ದೀಪಗಳ ಮಧ್ಯೆ ರಾತ್ರಿ ಕಳೆದುಹೋಗಿದ್ದೂ ತಿಳಿಯಲಿಲ್ಲ. ರಾತ್ರಿ ಕಾಲಿಡದೆ ನಿದ್ರಾದೇವಿಗೂ ಹತ್ತಿರ ಬರುವ ಮನಸ್ಸಿಲ್ಲ.
ನಾನು ಕಾಯುತ್ತಲೇ ಇದ್ದೇನೆ ನನ್ನ ಅಂಗಳದೆದುರು.. ಒಂದು ಸಡಗರದ ಸೂರ್ಯಾಸ್ತಕ್ಕಾಗಿ ಒಂದೇ ಒಂದು ಸುಂದರ ಮುಸ್ಸಂಜೆಗಾಗಿ……
ಆಪ್ತ 🙂
GuDDi
andre, baraha Guddu
Nimge personallaagi mail maaDteeni, EnO hELbEku 😉
– Chetana
ತುಂಬಾ ಸುಂದರವಾಗಿದೆ
ನಗ್ನ ಸತ್ಯ ವೂ ಹೌದು
ನನಗೆ ಸೂರ್ಯಾಸ್ತ ನೋಡದೆ ೫ ತಿಂಗಳು ಕಳೆದು ಹೋಗಿದೆ
🙂
chweeet 🙂
ಮಸ್ತ್ ಮಸ್ತ್ 🙂
Interesting….:)
Nice to read. Good Keep expressing….. That keep you grow
ನಿಮ್ಮ ಮನದ ಹಸಿ ಹಸಿ ಕಾಮನೆಗಳ ರಂಗು,ನನ್ನ ಮನದಂಗಳದಲ್ಲಿ ಕಾಮನಬಿಲ್ಲ ಮೂಡಿಸಿತು…
ಪ್ರಿಯ ಬ್ಲಾಗಿಗರೆ,
ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.
ತಮ್ಮ ವಿಶ್ವಾಸಿ
ಬೇಳೂರು ಸುದರ್ಶನ
ಸಲಹಾ ಸಮನ್ವಯಕಾರ, ಕಣಜ ಯೋಜನೆ
(ಕರ್ನಾಟಕ ಜ್ಞಾನ ಆಯೋಗದ ಯೋಜನೆ)
ಈ ಮೈಲ್: projectmanager@kanaja.net
http://www.kanaja.in
ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
ಬೆಂಗಳೂರು – 560100
ದೂರವಾಣಿ: ೯೭೪೧೯೭೬೭೮೯